ನಾಯಕನೊಬ್ಬನ ಮುಖವಾಡ ಕಳಚಿದ ಇಶಾ ಕೊಪ್ಪಿಕರ್:​ ಕಹಿ ಘಟನೆ ಮೆಲಕು ಹಾಕಿದ ಓ ನನ್ನ ನಲ್ಲೆ

Isha
Published on

ಹೈದರಾಬಾದ್​: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ.

ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಇಶಾ ಕೊಪ್ಪಿಕರ್​ ಸೇರಿಕೊಂಡಿದ್ದಾರೆ.

ಇಶಾ ಕೊಪ್ಪಿಕರ್​ ಕನ್ನಡಗಿರಿಗೇನು ಗೊತ್ತಿರದ ಮುಖವಲ್ಲ. ಸೂರ್ಯವಂಶ ಹಾಗೂ ಓ ನನ್ನ ನಲ್ಲೆ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದುಕೊಂಡಿದ್ದಾರೆ. 90ರ ದಶಕದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿದ ನಟಿಯಾಗಿದ್ದಾರೆ. 2009ರಲ್ಲಿ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ಇಶಾ ಕೊಪ್ಪಿಕರ್​ ಇದೀಗ ತೆಲುಗು ನಟ ನಿಖಿಲ್​ ಅಭಿನಯದ ಕೇಶವ ಸಿನಿಮಾ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜೀವನದಲ್ಲಿ ನಡೆದ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ವಿದ್ಯಾಭ್ಯಾಸದ ಸಂದರ್ಭದಲ್ಲಿ ಪಾಕೆಟ್​ ಮನಿಗಾಗಿ ಮಾಡೆಲಿಂಗ್​ ಮಾಡಿದೆ. ಇದರಿಂದಾಗಿ ಸಿನಿಮಾ ಅವಕಾಶಗಳು ಬರಲು ಆರಂಭವಾಯಿತು. ಎಕ್​ ಥ ದಿಲ್​ ಥ ಧಡ್ಕನ್​ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದೆ. ಆದಾಗ್ಯೂ, ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ಯಾರೋ ಒಬ್ಬರು ನನಗೆ ಕರೆ ಮಾಡಿದರು. ನೀವು ಮೊದಲು ನಾಯಕನನ್ನು ಭೇಟಿ ಮಾಡಬೇಕು ಎಂದರು. ಆ ನಂತರ ನಾಯಕನಿಗೆ ಕರೆ ಮಾಡಿದೆ. ನೀನೊಬ್ಬಳೇ ಬಾ, ಏಕಾಂತದಲ್ಲಿ ಭೇಟಿಯಾಗೋಣ, ಯಾರೂ ಕೂಡ ನಿನ್ನ ಜತೆ ಇರಬಾರದು ಎಂದು ಯಾರು ಹೇಳಿದರು ಎಂದು ಹಳೆಯ ಘಟನೆಯನ್ನು ಮೆಲಕು ಹಾಕಿದರು.

ಹೀರೋ ಜತೆ ಮಾತನಾಡಿದ ಬಳಿಕ ಅವರ ಉದ್ದೇಶ ತಿಳಿಯಿತು. ತಕ್ಷಣ ನಿರ್ಮಾಪಕರ ಜತೆ ಮಾತನಾಡಿ, ನನ್ನ ಪ್ರತಿಭೆಯೊಂದಿಗೆ ನಾನು ಇಲ್ಲಿಗೆ ಬಂದಿದ್ದೇನೆ. ಅವಕಾಶ ಸಿಕ್ಕರೆ ನನ್ನ ಪ್ರತಿಭೆಯನ್ನು ಅನಾವರಣ ಮಾಡುತ್ತೇನೆ ಎಂದು ನಿರ್ಮಾಪಕರಿಗೆ ಹೇಳಿದರಂತೆ. ಇದರಿಂದ ಕುಪಿತಗೊಂಡ ನಾಯಕ ಚಿತ್ರದಿಂದ ನನ್ನ ಹೆಸರನ್ನು ಕೈಬಿಟ್ಟರು ಎಂದು ಇಶಾ ಹೇಳಿಕೊಂಡಿದ್ದಾರೆ.

ಅಂದಹಾಗೆ ಇಶಾ ಅವರು ಎಕ್​ ಥ ದಿಲ್​ ಥ ಧಡ್ಕನ್​ ಸಿನಿಮಾದಲ್ಲಿ ನಟಿಸಿದ ಬಳಿಕ ಸಾಕಷ್ಟು ಅವಕಾಶಗಳನ್ನು ಅವರನ್ನು ಹುಡುಕಿಕೊಂಡು ಬಂದವಂತೆ. ಅಲ್ಲದೆ, ಒಳ್ಳೆಯ ಹೆಸರನ್ನು ಗಳಿಸಿದ ಅವರು ನಂತರದಲ್ಲಿ ಟಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಕಾಲಿವುಡ್​ನಲ್ಲೂ ಸಾಕಷ್ಟು ಅವಕಾಶಗಳೊಂದಿಗೆ ಎಲ್ಲ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net