ಟಾಲಿವುಡ್​ನಲ್ಲಿ ಈಗ ಈ ನಟಿಯ ಮದುವೆ ಖರ್ಚಿನದ್ದೇ ಚರ್ಚೆ: ಎಷ್ಟು ಅಂತ ಗೊತ್ತಾದ್ರೆ ನಿಮಗೂ ಅಚ್ಚರಿಯಾಗುತ್ತೆ!

Indraja
Published on

ಹೈದರಾಬಾದ್​: ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಅನ್ನೋ ಮಾತಿದೆ. ಇಂದಿನ ಕಾಲದಲ್ಲಿ ಮನೆ ನಿರ್ಮಾಣ ಮತ್ತು ಮದುವೆ ಎಂಬುದು ಸುಲಭದ ಮಾತೇ ಅಲ್ಲ. ಅದಕ್ಕಾಗಿ ಸಾಕಷ್ಟು ಹಣ ಬೇಕೆ ಬೇಕು. ಬಡ ಜನರಿಗಂತೂ ಇದು ಕಷ್ಟದ ಹಾದಿ. ಏಕೆಂದರೆ, ಮದುವೆ ಎಂಬುದು ಇಂದು ಸಂಬಂಧದ ಬೆಸುಗೆಯಾಗುವ ಬದಲು ಪ್ರತಿಷ್ಠೆಯ ಪ್ರದರ್ಶನವಾಗಿಬಿಟ್ಟಿದೆ.

ರಾಜಕಾರಣಿಗಳು ಹಾಗೂ ದೊಡ್ಡ ಸೆಲೆಬ್ರಿಟಿಗಳ ಮದುವೆಗಳಲ್ಲಂತೂ ಅದ್ಧೂರಿತನವೇ ಎದ್ದು ಕಾಣುತ್ತಿರುತ್ತದೆ. ಆದರೆ, ಕೆಲವೊಂದಿಷ್ಟು ಮಂದಿ ಸರಳವಾಗಿ ಮದುವೆ ಆಗಿ ಸಮಾಜಕ್ಕೆ ಮಾದರಿ ಆಗುತ್ತಾರೆ. ಹೀಗ್ಯಾಕೆ ಈ ವಿಚಾರ ಅನ್ನೋ ಓದುಗರ ಪ್ರಶ್ನೆಗೆ ಉತ್ತರ ಮುಂದಿದೆ.

ಕಾಲಿವುಡ್​ ನಟಿ ಇಂದ್ರಜಾ ಅವರ ಬಗ್ಗೆ ಎಲ್ಲರಿಗೂ ತಿಳಿಯದೇ ಇದ್ದರೂ ಒಂದಿಷ್ಟು ಮಂದಿಗಂತೂ ಅವರ ಬಗ್ಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಇಂದ್ರಜಾ ಟಾಪ್​ ಹೀರೋಯಿನ್​ ಆಗಿದ್ದರು. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಇವರು 2006ರಲ್ಲಿ ಉದ್ಯಮಿ ಮೊಹಮ್ಮದ್​ ಅಬ್ಸರ್​ ಎಂಬುವರನ್ನು ಮದುವೆ ಆದರು. ಆ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡರು. ಅವರು ಇತ್ತೀಚೆಗೆ ಸಿನಿಮಾ ರಂಗದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್​ ಅನ್ನು ಆರಂಭಿಸಿದ್ದಾರೆ. ಟಿವಿ ಶೋ ಹಾಗೂ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ನಟಿ ಹಾಗೂ ಸಚಿವೆ ರೋಜಾ ಅವರು ಜಬರ್ದಸ್ತ್​ ಶೋ ಅನ್ನು ಬಿಟ್ಟ ಬಳಿಕ ಆ ಸ್ಥಾನಕ್ಕೆ ಇಂದ್ರಜಾ ಅವರು ಬಂದಿದ್ದಾರೆ. ಶೋನ ಮುಖ್ಯ ಜಡ್ಜ್​ ಆಗಿದ್ದಾರೆ. ಇತ್ತೀಚೆಗೆ ಇಂದ್ರಜಾ ಅವರು ಜಬರ್ದಸ್ತ್​ ಶೋನಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೋವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ನನ್ನದು ಲವ್​ ಮ್ಯಾರೇಜ್​. ನಮ್ಮ ಮದುವೆ ಕೇವಲ 13 ಮಂದಿ ಅತಿಥಿಗಳು ಬಂದಿದ್ದರು. ನಮ್ಮ ಮದುವೆ ಖರ್ಚಾಗಿದ್ದು, ಕೇವಲ 7500 ಸಾವಿರ ರೂಪಾಯಿ ಎಂದಿದ್ದಾರೆ.

ಇನ್ನು ಸಾಕಷ್ಟು ವಿಚಾರಗಳನ್ನು ಇಂದ್ರಜಾ ಅವರು ಕಾರ್ಯಕ್ರಮದಲ್ಲಿ ತಿಳಿಸಿದ್ದು, ಅದು ಗೊತ್ತಾಗಬೇಕಾದರೆ ಸಂಪೂರ್ಣ ಎಪಿಸೋಡ್​ ನೋಡಬೇಕಾಗುತ್ತದೆ. ಇನ್ನು ಇಂದ್ರಜಾ ಅವರ ಮದುವೆ ಖರ್ಚಿನ ಬಗ್ಗೆ ತಿಳಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಡಿವೋರ್ಸ್​ ತೆಗೆದುಕೊಳ್ಳುವವರ ನಡುವೆ ಸರಳವಾಗಿ ವಿವಾಹವಾಗಿ ಸುಖ ಸಂಸಾರ ನಡೆಸುತ್ತಿರುವ ನೀವು ಸಮಾಜಕ್ಕೆ ಒಳ್ಳೆಯ ಉದಾಹರಣೆ ಎಂದು ಕೊಂಡಾಡಿದ್ದಾರೆ. ತುಂಬಾ ಮಂದಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net