ನಟ ಧನುಷ್​ ತಂದೆಯ ಹೇಳಿಕೆಯಿಂದ ಸ್ಟಾರ್​ ದಂಪತಿಯ ಡಿವೋರ್ಸ್​ ಪ್ರಕರಣಕ್ಕೆ ಸ್ಫೋಟಕ ತಿರುವು!

Dhanush
Published on

ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿರುವ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ಜ.17ರಂದು ಏಕಾಏಕಿ ಗುಡ್​ ಬೈ ಹೇಳುವ ಮೂಲಕ ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕ್​ ನೀಡಿದ್ದಾರೆ. ಅನೋನ್ಯವಾಗಿದ್ದ ಸ್ಟಾರ್​ ಜೋಡಿಯ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನಿರಬಹುದೆಂಬ ಪ್ರಶ್ನೆಯೇ ಈಗ ಎಲ್ಲೆಡೆ ಕೇಳಿಬರುತ್ತಿರುವ ನಡುವೆಯೇ ಧನುಷ್​ ತಂದೆ ನೀಡಿರುವ ಹೇಳಿಕೆ ಡಿವೋರ್ಸ್​ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದೆ.

ಮಾಧ್ಯಮವೊಂದಕ್ಕೆ ಧನುಷ್​ ತಂದೆ ಕಸ್ತೂರಿ ರಾಜ ಸಂದರ್ಶನ ನೀಡಿದ್ದು, ಈ ವೇಳೆ ಮಗನ ಡಿವೋರ್ಸ್ ವಿಚಾರ ಮಾತನಾಡಿದ ಅವರು ಐಶ್ವರ್ಯಾ ಮತ್ತು ಧನುಷ್​ ನಡುವಿನ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗುವ ಮಾತುಗಳನ್ನು ಆಡಿದ್ದಾರೆ. ಆದರೆ, ಇದು ಸಾಮಾನ್ಯವಾಗಿ ಎಲ್ಲ ಕುಟುಂಬಗಳಲ್ಲಿಯು ನಡೆಯುವ ಪತಿ-ಪತ್ನಿ ಜಗಳವಷ್ಟೇ ಎಂದಿದ್ದಾರೆ.

ಇಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್​ನಲ್ಲಿದ್ದಾರೆ. ಮಗನಿಗೆ ಕೆಲವು ಸಲಹೆಗಳನ್ನು ನೀಡಿದ್ದೇನೆ ಎಂದು ಕಸ್ತೂರಿ ರಾಜ ಹೇಳಿಕೆ ನೀಡಿದ್ದಾರೆ. ಇದೀಗ ಧನುಷ್​ ತಂದೆಯ ಹೇಳಿಕೆಯನ್ನು ನೋಡಿದರೆ ಇಬ್ಬರು ಮತ್ತೆ ಒಂದಾಗಬಹುದು ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಅಭಿಮಾನಿಗಳ ಪಾಲಿಗೆ ಇದೊಂದು ರೀತಿಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ. ಅದರಲ್ಲೂ ಇಬ್ಬರು ಒಟ್ಟಿಗೆ ಹೈದರಾಬಾದ್​ನಲ್ಲಿ ಇರುವುದನ್ನು ಕೇಳಿದರೆ, ಇಬ್ಬರ ನಡುವಿನ ಮನಸ್ತಾಪ ದೊಡ್ಡದಲ್ಲ ಎಂದು ಭಾವಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ವೈಮನಸ್ಸನ್ನು ಮರೆತು ಮತ್ತೆ ಒಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.

ಜ. 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿರುವ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.

ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net