ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ವಿವಾದಿತ ನಟಿ ಮೀರಾ ಮಿಥುನ್​ ಬಂಧನ..!

Meera
Published on

ಚೆನ್ನೈ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಾಲಿವುಡ್​ ನಟಿ ಮೀರಾ ಮಿಥುನ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ದಲಿತ ಸಮುದಾಯದ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿ ಚೆನ್ನೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.​

ತಮಿಳುನಾಡಿನ ದಲಿತ ಕೇಂದ್ರಿತ ಪಕ್ಷ ವಿದುತಲೈ ಸಿರುತೈಗಲ್ ಕಚ್ಚಿ ನಾಯಕ ವನ್ನಿ ಅರಸ್​ ಅವರು ನೀಡಿದ ದೂರಿನ ಆಧಾರದ ಮೇಲೆ ನಟಿ ಮೀರಾ ಮಿಥುನ್​ ಅವರನ್ನು ಬಂಧಿಸಲಾಗಿದೆ. ಅನೇಕ ಮಾಧ್ಯಮಗಳ ವರದಿ ಪ್ರಕಾರ ಮೀರಾ ಆಗಸ್ಟ್​ 7ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೋದಲ್ಲಿ ದಲಿತ ಸಮುದಾಯದ ಬಗ್ಗೆ ಮೀರಾ ಕೆಲ ಅವಹೇಳಕಾರಿ ಮಾತುಗಳನ್ನು ಆಡಿದ್ದಾರೆ. ಅಂದಿನಿಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅನೇಕ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

ಸಿನಿಮಾ ಫಸ್ಟ್​ ಲುಕ್​ಗೆ ಬಳಸಿಕೊಳ್ಳಲು ನಿರ್ದೇಶಕರೊಬ್ಬರು ನನ್ನ ಫೋಟೋವನ್ನು ಕದ್ದಿದ್ದರು ಎಂದಿರುವ ಮೀರಾ ಇದಾದ ಬಳಿಕ ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ದಲಿತ ಸಮುದಾಯದವರು ಅಪರಾಧ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹೀಗಾಗಿ ಅವರು ಸಮಾಜದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿರುವ ದಲಿತ ಸಮುದಾಯದ ನಿರ್ದೇಶಕರು ಮತ್ತು ಜನರನ್ನು ಹೊರಗಾಕಬೇಕೆಂದು ಹೇಳಿದ್ದಾಳೆ.

ಇದೀಗ ನಟಿಯ ಮೇಲೆ ಭಾರತೀಯ ದಂಡ ಸಂಹಿತೆಯ​ 153, 153ಎ (1) (ಎ), 505 (1) (ಬಿ), 505 (2) ಸೆಕ್ಷನ್ ಸೇರಿದಂತೆ SC/ST ದೌರ್ಜನ್ಯ ತಡೆ ಕಾಯ್ದೆ ಅಡಿಯ ಅನೇಕ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿನಿಮಾ ವಿಚಾರಕ್ಕೆ ಬರುವುದಾರೆ, ಮೀರಾ ಕೆಲ ತಮಿಳು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್​ಬಾಸ್​ 3ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ವಿಜಯ್​ ಹಾಗೂ ಸೂರ್ಯ ಸೇರಿದಂತೆ ಅನೇಕ ನಟರ ವಿರುದ್ಧವೂ ನಾಲಿಗೆ ಹರಿಬಿಡುವ ಮೂಲಕ ಹಿಂದೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net