

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ "ಬಿಗ್ಬಾಸ್" ತನ್ನ 8ನೇ ಆವೃತ್ತಿಯ ಅಂತಿಮ ಘಟಕ್ಕೆ ಬಂದಿದೆ. ಈ ವಾರವೇ (ಆಗಸ್ಟ್ 8) ಫೈನಲ್ ಎಪಿಸೋಡ್ ನಡೆಯಲಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮತ್ತು ಲೆಕ್ಕಾಚಾರ ಆರಂಭವಾಗಿದೆ. ಇದರ ನಡುವೆ ನಿರ್ಗಮಿತ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಭಾರಿ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಬಿಗ್ಬಾಸ್ ಮನೆಯಲ್ಲಿನ ಅವರ ದಾಖಲೆ.
ಚಕ್ರವರ್ತಿ ಚಂದ್ರೂಚೂಡ್ ಈಗಾಗಲೇ ಮನೆಯಿಂದ ನಿರ್ಗಮಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಮನೆಗೆ ಎಂಟ್ರಿ ಕೊಟ್ಟ ಚಂದ್ರಚೂಡ್ ಆರಂಭದಿಂದಲೂ ಅಬ್ಬರಿಸಿ ಬೊಬ್ಬಿರಿದರು. ಸಾಮಾನ್ಯ ವಿಚಾರಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು. ಅದರಲ್ಲೂ ಸಹ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಮಧ್ಯದ ಬೆರಳು ತೋರಿಸಿದ್ದು ಚಂದ್ರಚೂಡ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾದವು.
ಚಂದ್ರಚೂಡ್ ಕೂಡ ಬಿಗ್ಬಾಸ್ ಮೂಲಕ ತಮ್ಮದೇ ಅಭಿಮಾನಿಗಳ ಬಳಗವನ್ನು ಸಾಮಾಜಿಕ ಜಾಲತಾಣದಲ್ಲಿ ಹೊಂದಿದ್ದಾರೆ. ಅವರು ಮನೆಯಿಂದ ನಿರ್ಗಮಿಸಿದರ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಚಂದ್ರಚೂಡ್ ಅವರದ್ದೂ ನೇರ ನಡೆಯ ವ್ಯಕ್ತಿತ್ವ ಅಂತಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಾದಗಳೂ ಏನೇ ಇರಲಿ, ಚಂದ್ರಚೂಡ್ ಮಾತ್ರ ಬಿಗ್ಬಾಸ್ ಮನೆಯಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಸುದೀಪ್ ಅವರ ಒಂದು ಎಪಿಸೋಡ್ ಅನ್ನು ಇಲ್ಲಿ ನೆನಪು ಮಾಡುವುದಾದರೆ ಚಂದ್ರಚೂಡ್ ಬಗ್ಗೆ ಅವರು ಒಂದು ಮಾತನ್ನು ಹೇಳಿದ್ದಾರೆ. ಇದುವರೆಗಿನ ಸೀಸನ್ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಅತಿ ಹೆಚ್ಚು ದಿನ ಮನೆಯಲ್ಲಿ ಉಳಿದ ಏಕೈಕ ಸ್ಪರ್ಧಿಯೆಂದರೆ ಅದು ಚಂದ್ರಚೂಡ್. ಆದರೂ ಸುದೀಪ ಅವರ ಮೆಚ್ಚುಗೆಯನ್ನು ಕೆಲವರು ಒಪ್ಪಿಕೊಂಡಿಲ್ಲ. ದರ್ಬಲ ಸ್ಪರ್ಧಿಯನ್ನು ಶೋ ನಿರ್ಮಾಪಕರು ಬೇಕಂತಲೇ ಉಳಿಸಿಕೊಂಡಿದ್ದರು. ಕಳಪೆ ಪ್ರದರ್ಶನದಿಂದ ಪ್ರತಿಬಾರಿ ನಾಮಿನೇಟ್ ಆದಾಗ ಬೇಕಂತಲೇ ಅವರನ್ನು ಉಳಿಸಿಕೊಳ್ಳಲಾಯಿತು ಎಂದಿದ್ದಾರೆ.
ಸಾಮಾನ್ಯವಾಗಿ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡುವ ಸ್ಪರ್ಧಿಗಳು ಹೆಚ್ಚೆಂದರೆ ಎರಡ್ಮೂರು ವಾರ ಇರಬಹುದು. ಆದರೆ, ಇದೇ ಮೊದಲ ಬಾರಿಗೆ ಚಂದ್ರಚೂಡ್ ಅವರು ಹೆಚ್ಚಿನ ವಾರಗಳು ಮನೆಯಲ್ಲೇ ಇದ್ದರು. ಕರೊನಾದಿಂದ 75 ದಿನಗಳಿಗೆ ಶೋ ಮೊಟಕುಗೊಂಡಾಗಲೂ ಚಂದ್ರಚೂಡ್ ಇದ್ದರು. ಇದಾದ ಬಳಿಕ ಲಾಕ್ಡೌನ್ ಬಳಿ ಎರಡನೇ ಇನ್ನಿಂಗ್ಸ್ ಆರ್ಂಭವಾದಗಲೂ ಎರಡ್ಮೂರು ವಾರಗಳವರೆಗೆ ಚಂದ್ರಚೂಡ್ ಮನೆಯಲ್ಲಿದ್ದರು. ಈ ಮೂಲಕ ಬಿಗ್ಬಾಸ್ ಇತಿಹಾಸದಲ್ಲಿ ಚಂದ್ರಚೂಡ್ ವಿನೂತನ ದಾಖಲೆಯನ್ನು ಬರೆದಿದ್ದಾರೆ. (ಏಜೆನ್ಸೀಸ್)