

ಹೈದರಾಬಾದ್: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಟಾಲಿವುಡ್ ಕಿರುತೆರೆ ನಟಿ ಗಲಾಟಾ ಗೀತು ಸೇರಿಕೊಂಡಿದ್ದಾರೆ.
ಗೀತು ಚಿತ್ತೂರು ಮೂಲದವರು. ತಮ್ಮ ಚಿತ್ತೂರು ಭಾಷೆಯಲ್ಲಿ ಇನ್ಸ್ಟಾಗ್ರಾಂ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋ ಮಾಡುವುದರ ಮೂಲಕ ಖ್ಯಾತಿ ಗಳಿಸಿದ್ದಾರೆ. ಇದಲ್ಲದೆ, ಟಿವಿ ಶೋಗಳಲ್ಲಿ ನಟಿಸುವ ಮೂಲಕವೂ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ. ತೆಲುಗಿನ ಜಬರ್ದಸ್ತ್ ಮತ್ತು ಶ್ರೀದೇವಿ ಡ್ರಾಮಾ ಕಂಪನಿ ಶೋಗಳಲ್ಲಿ ನಟಿಸುವ ಮೂಲಕ ಹೆಚ್ಚು ಖ್ಯಾತಿ ಮತ್ತು ಹಣವನ್ನು ಸಂಪಾದಿಸಿದ್ದಾರೆ.
ಇತ್ತೀಚೆಗೆ ಗೀತು ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ತಮಗಾದ ಕಾಸ್ಟಿಂಗ್ ಕೌಚ್ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ನಾನು ಆರ್ಜೆ ಆಗಲು ಬಯಸಿದ್ದೆ. ಇತ್ತೀಚೆಗೆ ಕೆಲವು ದೊಡ್ಡ ಸಿನಿಮಾ ಬ್ಯಾನರ್ನ ಜನರು ಅವರ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ನನಗೆ ನಟನೆ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ ಎಂದು ಹೇಳಿದ್ದೆ. ಆದರೆ, ನಾನು ಕೆಲವೊಂದು ಶಾರ್ಟ್ ಸಿನಿಮಾಗಳನ್ನು ಮಾಡಿದ್ದೇನೆ ಎಂದು ಗೀತು ಹೇಳಿದರು.
ನಾನು ಇತ್ತೀಚೆಗಷ್ಟೇ ಕಾಸ್ಟಿಂಗ್ ಕೌಚ್ ಎಂಬ ಕಹಿ ಅನುಭವವನ್ನು ಎದುರಿಸಿದ್ದೇನೆ. ಆಸ್ಟ್ರೇಲಿಯಾದಲ್ಲಿ ಒಂದು ಕಾರ್ಯಕ್ರಮ ಆಯೋಜನೆಯಾಗಿತ್ತು. ಆ ಕಾರ್ಯಕ್ರಮದ ನಿರೂಪಣೆ ಮಾಡಲು ಯಾರೋ ಒಬ್ಬರು ನನ್ನನ್ನು ಕೇಳಿದ್ದರು. ನನಗೆ ನಿರೂಪಣೆ ಮಾಡುವುದು ಇಷ್ಟವಾದ್ದರಿಂದ ಓಕೆ ಅಂತಾ ಹೇಳಿದ್ದೆ.
ಕಾರ್ಯಕ್ರಮ ಆಸ್ಟ್ರೇಲಿಯಾದಲ್ಲಿ ಆಗಿದ್ದರಿಂದ ಸಂಭಾವನೆ ದೊಡ್ಡದಾಗಿರುತ್ತದೆ ಅಂದುಕೊಂಡೆ. ಎಲ್ಲವೂ ಸರಿಯಾಗಿತ್ತು. ಇದರ ನಡುವೆ ಈವೆಂಟ್ ಮ್ಯಾನೇಜರ್ ಪಿಎ ಅವರು ವಿಮಾನ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ನನ್ನ ಜೊತೆ ಮಾತನಾಡಿದರು. ನಮ್ಮ ಮ್ಯಾನೇಜರ್ ಜತೆ ನೀವು ವೈಯಕ್ತಿಕವಾಗಿ ಸಲುಗೆ ಹೊಂದಿದರೆ, ನಾವು ಇನ್ನೂ ಹೆಚ್ಚಿನ ಹಣವನ್ನು ಪಾವತಿಸುತ್ತೇವೆ ಎಂದರು. ಅದನ್ನು ಕೇಳಿ ನನಗೆ ಶಾಕ್ ಆಯಿತು. ನನಗೆ ಇದೆಲ್ಲ ಇಷ್ಟವಿಲ್ಲ ಮತ್ತು ನಾನು ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಫೋನ್ ಇಟ್ಟೆ. ನಂತರವೂ ಅನೇಕ ಬಾರಿ ಕರೆ ಮಾಡಿದರು. ಕನಿಷ್ಟ ಪಕ್ಷ ನಿರೂಪಣೆ ಮಾಡಿ ಎಂದರು. ಆದರೆ, ಅವರ ಬುದ್ಧಿ ಗೊತ್ತಾದ ಬಳಿಕವೂ ನಾನು ಒಪ್ಪಿಕೊಳ್ಳುವುದು ಸರಿಯಲ್ಲ ಅನಿಸಿತು. ಫೋನ್ ಇಟ್ಟು ನಂಬರ್ ಬ್ಲಾಕ್ ಮಾಡಿದೆ ಎಂದು ಗೀತು ಹೇಳಿದ್ದಾರೆ. (ಏಜೆನ್ಸೀಸ್)