ಕ್ಷಮೆಯಾಚಿಸದಿದ್ರೆ ಚಪ್ಪಲಿ ಏಟು: ಐಟಂ ಸಾಂಗ್​ ಭಕ್ತಿ ಗೀತೆ ಇದ್ದಂತೆ ಎಂದ ಡಿಎಸ್​ಪಿಗೆ ಬಿಜೆಪಿ ಶಾಸಕ ಎಚ್ಚರಿಕೆ!

DSP
Published on

ಹೈದರಾಬಾದ್​: ನಟ ಅಲ್ಲು ಅರ್ಜುನ್​ ನಟನೆಯ "ಪುಷ್ಪ" ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗುತ್ತಿದೆ. ಐಟಂ ಸಾಂಗ್​ನಲ್ಲಿ ಪುರುಷರ ಬಗ್ಗೆ ಅವಹೇಳನ ಮಾಡಿ ಚಿತ್ರತಂಡ ಟೀಕೆಗೆ ಗುರಿಯಾಗಿತ್ತು. ಇದೀಗ ಸಿನಿಮಾ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಆಡಿರುವ ಒಂದೇ ಒಂದು ಮಾತು ಮತ್ತೊಮ್ಮೆ ಪುಷ್ಪ ಚಿತ್ರವನ್ನು ವಿವಾದ ಕೇಂದ್ರಕ್ಕೆ ಎಳೆದುತಂದಿದೆ.

ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರು ಆಗಿರುವ ದೇವಿಶ್ರೀ ಪ್ರಸಾದ್ (ಡಿಎಸ್​ಪಿ)​ ಐಟಂ ಸಾಂಗ್​ ನನಗೆ ಭಕ್ತಿ ಗೀತೆ ಇದ್ದಂತೆ ಎಂದು ಹೇಳಿದ್ದರು. ಅಲ್ಲದೆ, ಐಟಂ ಸಾಂಗ್​ಗಳು ಒಂದು ರೀತಿಯ ಧ್ಯಾನವೂ ಕೂಡ ಹೌದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದೀಗ ಈ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್​ ದೇವಿಶ್ರೀ ಹೇಳಿಕೆಯನ್ನು ಖಂಡಿಸಿದ್ದಾರೆ. ದೇವಿಶ್ರೀ ಅವರು ಐಟಂ ಸಾಂಗ್​ಗೆ ಭಕ್ತಿ ಗೀತೆಯನ್ನು ಹೇಗೆ ಹೋಲಿಕೆ ಮಾಡುತ್ತಾರೆ? ಅನಗತ್ಯವಾಗಿ ಡಿಎಸ್​ಪಿ ಅವರು ಹಿಂದು ಭಕ್ತಿ ಗೀತೆಯ ವಿರುದ್ಧ ಅರ್ಥವಿಲ್ಲದ ಕಾಮೆಂಟ್​ಗಳನ್ನು ಮಾಡಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈ ಕೂಡಲೇ ಡಿಎಸ್​ಪಿ ಬೇಷರತ್​ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಕ್ಷಮೆಯಾಚಿಸದಿದ್ದರೆ ಹಿಂದು ಸಮುದಾಯದಿಂದ ಡಿಎಸ್​ಪಿ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಅಲ್ಲದೆ, ತೆಲಂಗಾಣದಲ್ಲಿ ಸ್ವತಂತ್ರವಾಗಿ ತಿರುಗಾಡಲು ಬಿಡುವುದಿಲ್ಲ. ಕ್ಷಮೆಯಾಚಿಸದಿದ್ದರೆ, ಚಪ್ಪಲಿಯಲ್ಲಿ ಹೊಡೆಯಬೇಕಾಗುತ್ತದೆ ಎಂದು ಶಾಸಕ ರಾಜಾಸಿಂಗ್​ ಬೆದರಿಕೆ ಹಾಕಿದ್ದಾರೆ.

ಸಾಮಾನ್ಯವಾಗಿ ಡಿಎಸ್​ಪಿ ವಿವಾದಕ್ಕೆ ಸಿಲುಕುವುದಿಲ್ಲ. ಆದರೆ, ಈ ಬಾರಿ ತಾವಾಡಿದ ಮಾತು ವಿವಾದಕ್ಕೆ ಎಳೆದುತಂದಿದ್ದು, ಬಿಜೆಪಿ ಶಾಸಕರ ಹೇಳಿಕೆಯ ಬಗ್ಗೆ ಇನ್ನು ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net