

ಬೆಂಗಳೂರು: ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಯಾವಾಗ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ಬಾಸ್ ಮನೆಯ ನವೀಕರಣ ನಡೆಯುತ್ತಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಪ್ರೋಮೋ ಶೂಟ್ ಸಹ ಪೂರ್ಣಗೊಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ಬಾಸ್ ಮನೆ ಒಂದು ಭಾಗದ ಫೋಟೋವೊಂದನ್ನು ತಮ್ಮ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ನಿರ್ಮಾಣ ಹಂತದಲ್ಲಿದೆ ಎಂದು ಶೀರ್ಷಿಕೆ ನೀಡಿದ್ದರು. ಕಿಚ್ಚ ಸುದೀಪ್ ಅವರು ಪ್ರೋಮೋ ಶೂಟ್ನಲ್ಲಿ ಭಾಗಿಯಾಗಿ ಬಂದ ಬಳಿಕ ಅವರು ಸಹ ಟ್ವೀಟ್ ಮಾಡಿದ್ದಾರೆ. ಬಿಗ್ಬಾಸ್ ಹೊಸ ಸೀಸನ್ಗಾಗಿ ಅತ್ಯಾಕರ್ಷಕ ಪ್ರೋಮೋ ಶೂಟ್ ಮಾಡಲಾಗಿದೆ. ಇಡೀ ತಂಡದ ಶ್ರಮಕ್ಕೆ ಹಾಗೂ ಈ ಶೂಟ್ನಲ್ಲಿ ಭಾಗವಹಿಸಿದ್ದ ಎಲ್ಲ ಪ್ರೀತಿಯ ಜನರಿಗೆ ಧನ್ಯವಾದಗಳು. ನೀವೆಲ್ಲ ಆದಷ್ಟು ಬೇಗ ಪ್ರೋಮೋವನ್ನು ಎದುರು ನೋಡಲಿದ್ದೀರಿ. ಇದು ಸೂಪರ್ ಘೋಷಣೆ ಎಂದಿದ್ದಾರೆ.
ಬಿಗ್ಬಾಸ್ 9ಕ್ಕೆ ಭಾರೀ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕಲರ್ಸ್ ಕನ್ನಡ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಬಿಗ್ಬಾಸ್ ಕಾರ್ಯಕ್ರಮದ ಹೆಸರನ್ನು ಬಳಸಿಕೊಂಡು ಯಾರೋ ವಂಚಿಸುತ್ತಿರುವ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಲರ್ಸ್ ಕನ್ನಡ ಎಚ್ಚರಿಯನ್ನು ನೀಡಿದೆ. ಅದರ ಸಾರಾಂಶ ಈ ಕೆಳಕಂಡಂತಿದೆ.
ಬಿಗ್ಬಾಸ್ ಆಕಾಂಕ್ಷಿಗಳ ಗಮನಕ್ಕೆ...
ಬಿಗ್ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್ ನಡೆಸಲಾಗುತ್ತಿಲ್ಲ. ಬಿಗ್ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ, ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ ಸೇರಿದಂತೆ ಯಾವುದೇ ಹೆಸರಿನಲ್ಲಿ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ. ಎಂಬುದು ನೆನಪಿರಲಿ. ಬಿಗ್ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್ನ ಅಧಿಕೃತ ಮೀಡಿಯಾ ಹ್ಯಾಂಡಲ್ಗಳನ್ನು ಮಾತ್ರ ಪರಿಗಣಿಸಿ ಎಂದು ಕಲರ್ಸ್ ಕನ್ನಡ ಹೇಳಿದೆ.
ಅಂದಹಾಗೆ ಈ ಬಾರಿ ಬಿಗ್ಬಾಸ್ ಒಟಿಟಿ ಮತ್ತು ಕಲರ್ಸ್ ಕನ್ನಡ ವಾಹಿನಿ ಎರಡರಲ್ಲೂ ಪ್ರಸಾರವಾಗಲಿದೆ. ಎರಡರಲ್ಲೂ ಕಿಚ್ಚನದೇ ನಿರೂಪಣೆ ಇರಲಿದೆ. ಈ ತಿಂಗಳ ಅಂತ್ಯಕ್ಕೆ ಪ್ರೋಮೋ ಬಿಡುಗಡೆಯಾಗುವುದ ಸಾಧ್ಯತೆ ಇದೆ. ಆಗಸ್ಟ್ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಲಿದ್ದು, 45 ದಿನಗಳ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಬಿಗ್ಬಾಸ್ ಮನೆಗೆ ಮಾಜಿ ಕ್ರಿಕೆಟಿಗ ವಿನಯ್ ಕುಮಾರ್, ನಟ ನವೀನ್ ಕೃಷ್ಣ, ನಿರ್ದೇಶಕ ರವಿ ಶ್ರೀವಾಸ್ತವ, ನಟ ತರುಣ್ ಚಂದ್ರ, ಕಿರುತೆರೆ ನಟಿ ನಮ್ರತಾ ಗೌಡ, ನಟ ದಿಲೀಪ್ ರಾಜ್, ಹಿರಿಯ ನಟಿ ಪ್ರೇಮಾ, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ, ನಟಿ ರೇಖಾ ವೇದವ್ಯಾಸ್, ಮಿಮಿಕ್ರಿ ಗೋಪಿ ಮತ್ತು ಟಿವಿ ನಿರೂಪಕ ಚಂದನ್ ಶರ್ಮಾ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)