

ಬೆಂಗಳೂರು: ‘ಬಿಗ್ ಬಾಸ್ ಒಟಿಟಿ ಕನ್ನಡ’ದ ಮೊದಲ ಸೀಸನ್ ಆರಂಭವಾಗಿ ಒಂದು ವಾರ ಸಮೀಪಿಸುತ್ತಿದೆ. ನಾಳೆ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಆರಂಭವಾಗಲಿದ್ದು, ಮನೆಯಿಂದ ಯಾರು ನಿರ್ಗಮಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮೊದಲ ವಾರವೇ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ನಂದು, ಜಶ್ವಂತ್ ಬೋಪಣ್ಣ, ಕಿರಣ್ ಯೋಗೇಶ್ವರ್ ಮತ್ತು ಅಕ್ಷತ ಕುಕಿ ನಾಮಿನೇಟ್ ಆಗಿದ್ದಾರೆ.
ಶೋ ಆರಂಭವಾಗಿ ಒಂದು ವಾರದಲ್ಲೇ ಮನೆಯಲ್ಲಿ ಜಗಳ, ಕೋಪ-ತಾಪ, ಮುನಿಸು, ಅಳು, ನಗು, ಸ್ನೇಹ ಪ್ರೀತಿ ಎಲ್ಲವು ಶುರುವಾಗಿದ್ದು, ಒಟಿಟಿ ಶೋ ವೀಕ್ಷಕರನ್ನು ತನ್ನತ್ತ ಸೆಳೆದಿದೆ. ಈಗಾಗಲೇ ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಸೂರ್ತಿ ಗೌಡ ನಡುವೆ ಲವ್ ಅಫೇರ್ ಶುರುವಾಗಿದೆ ಎಂಬ ಟಾಕ್ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ದೊಡ್ಮನೆಯಲ್ಲಿ ಇಬ್ಬರು ಯಾವಾಗಲೂ ಅಂಟಿಕೊಂಡೇ ಇರುತ್ತಾರೆ.
ಇದರ ನಡುವೆ ಮತ್ತೊಂದು ಲವ್ ಸ್ಟೋರಿ ಮನೆಯಲ್ಲಿ ಆರಂಭವಾಗಿದೆ. ಮಾಜಿ ರೇಡಿಯೋ ಜಾಕಿ ಮತ್ತು ಪ್ರಖ್ಯಾತ ತುಳು ಸ್ಟಾರ್ ರೂಪೇಶ್ ಶೆಟ್ಟಿ ಮತ್ತು ಕಿರುತೆರೆ ಕಲಾವಿದೆ ಹಾಗೂ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ನಡುವೆ ಪ್ರತಿ ಚಿಗುರೊಡೆದಿರುವ ಲಕ್ಷಣಗಳು ಗೋಚರವಾಗುತ್ತಿದೆ. ಮನೆಯವರು ಕೂಡ ಇಬ್ಬರ ನಡುವೆ ಏನೋ ಇದೆ ಎಂದು ಹೇಳಿದರೂ, ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ನೀವಂದುಕೊಂಡ ರೀತಿಯಲ್ಲಿ ನಮ್ಮ ನಡುವೆ ಏನೂ ಇಲ್ಲ ಎಂಬ ಸಂದೇಶವನ್ನು ರೂಪೇಶ್ ಮತ್ತು ಸಾನ್ಯಾ ರವಾನಿಸಿದರೂ ಇಬ್ಬರ ನಡವಳಿಕೆ ಮತ್ತು ಮಾತುಗಳು ಇಬ್ಬರ ನಡುವೆ ಏನೋ ಇದೆ ಎಂಬುದನ್ನು ಸಾರುತ್ತಿವೆ.
31 ವರ್ಷದ ರೂಪೇಶ್ ಶೆಟ್ಟಿ ಅವರು ಮಂಗಳೂರಿನಲ್ಲಿ ರೇಡಿಯೋ ಜಾಕಿ ಮತ್ತು ವಿಜೆ ಆಗಲು ಪ್ರಯತ್ನಿಸುವುದಕ್ಕಿಂತ ಮುಂಚೆಯೇ ಯೂಟ್ಯೂಬರ್ ಆಗಿ ತಮ್ಮ ಉದ್ಯಮ ವೃತ್ತಿಯನ್ನು ಪ್ರಾರಂಭಿಸಿದರು. ಇದರೊಂದಿಗೆ ಅಮ್ಮರ್ ಪೋಲಿಸಾ, ಗಿರ್ಗಿಟ್ ಮತ್ತು ಇತರೆ ಸೂಪರ್ ಹಿಟ್ ಹಾಸ್ಯ ಚಲನಚಿತ್ರಗಳೊಂದಿಗೆ ತುಳು ಚಿತ್ರರಂಗದಲ್ಲಿ ರೂಪೇಶ್ ಯಶಸ್ಸನ್ನು ಕಂಡುಕೊಂಡಿದ್ದಾರೆ. ಅಲ್ಲದೆ, ಇತ್ತೀಚಿಗೆ ಕನ್ನಡದ ಗೋವಿಂದಾ ಗೋವಿಂದಾ ಚಿತ್ರದಲ್ಲಿ ನಟಿಸಿದ್ದಾರೆ.
ಮತ್ತೊಂದೆಡೆ, ಸಾನ್ಯಾ ಅಯ್ಯರ್ ಅವರು ಜನಪ್ರಿಯ ಟಿವಿ ಧಾರಾವಾಹಿ ಪುಟ್ಟ ಗೌರಿ ಮದುವೆಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಬಾಲ ನಟಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು. ಕಿರುತೆರೆ ಕಲಾವಿದೆ ಮಾತ್ರವಲ್ಲದೆ, ಮಾಡೆಲ್ ಆಗಿಯು ಸಾನ್ಯಾ ಖ್ಯಾತಿಯನ್ನು ಗಳಿಸಿದ್ದಾರೆ.