

ಬೆಂಗಳೂರು: ದಿನ ಕಳೆದಂತೆ ಬಿಗ್ಬಾಸ್ 8ನೇ ಆವೃತ್ತಿಯ ಎರಡನೇ ಇನ್ನಿಂಗ್ಸ್ ಹೆಚ್ಚು ಕುತೂಹಲ ಕೆರಳಿಸುತ್ತಿದ್ದು, ಸಾಮಾನ್ಯ ಜನರಿಂದಲೂ ಹೆಚ್ಚು ಗಮನ ಸೆಳೆಯುತ್ತಿದೆ. ಶೋನಲ್ಲಿ ನೀಡುತ್ತಿರುವ ಕಠಿಣ ಟಾಸ್ಕ್ನಲ್ಲಿ ಜಯಿಸಿ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದಾರೆ.
ಶೋ ಅಂತಾ ಬಂದಾಗ ಎರಡನೇ ಇನ್ನಿಂಗ್ಸ್ನಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ನೀಡಿದ ಚಕ್ರವರ್ತಿ ಅವರು ಆರಂಭದಿಂದಲೇ ಮನೆಯಲ್ಲಿ ತಮ್ಮ ನೇರ ಮಾತಿನ ಮೂಲಕ ಗದ್ದಲ ಎಬ್ಬಿಸುತ್ತಿದ್ದಾರೆ. ಅಲ್ಲದೆ, ಹೊಸ ಹೊಸ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.
ಚಕ್ರವರ್ತಿ ಆಗಾಗ್ಗೆ ಮನೆಯಲ್ಲಿ ಇತರ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡುತ್ತಿದ್ದಾರೆ. ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ಮೇಲೆ ಚಕ್ರವರ್ತಿ ಅವರು ಬೇಸರಗೊಂಡಿರುವಂತೆ ಕಾಣುತ್ತಿದೆ. ಮನೆಯಲ್ಲಿ ಹೆಚ್ಚು ದಿನ ಉಳಿಯಲು ಇಬ್ಬರು ತಮ್ಮ ಸಂಬಂಧವನ್ನು ಹೇಗೆ ನಕಲಿ ಮಾಡಿದರು ಎಂಬುದರ ಕುರಿತು ಮನೆಯಲ್ಲಿ ಇತರ ಸ್ಪರ್ಧಿಗಳಿಗೆ ಹೇಳುವುದನ್ನು ಮಂಜು ಮತ್ತು ದಿವ್ಯಾ ಕೇಳಿದಾಗ, ಮಂಜು ಅದನ್ನು ತಮಾಷೆಯಾಗಿ ತೆಗೆದುಕೊಂಡರೆ, ದಿವ್ಯಾ ಸುರೇಶ್ ಕಣ್ಣೀರಾಕಿದರು.
ಈ ಎಪಿಸೋಡ್ ವೀಕ್ಷಿಸಿದ ನೆಟ್ಟಿಗರು ಇದೀಗ ಚಕ್ರವರ್ತಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸ್ಪರ್ಧಿಗಳ ವರ್ತನೆ ಅಥವಾ ಭಾವನೆಗಳನ್ನು ನಿಯಂತ್ರಿಸಲು ಚಕ್ರವರ್ತಿ ಯಾರು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಚಕ್ರವರ್ತಿ ಅವರು ಆಟದ ಮೇಲೆ ಗಮನಹರಿಸಲಿ, ಇಲ್ಲವಾದಲ್ಲಿ ಅವರನ್ನು ಶೋನಿಂದ ಆಚೆಗೆ ಕಳುಹಿಸಿ ಎಂದು ಕಾರ್ಯಕ್ರಮ ನಡೆಸುವವರನ್ನು ನೆಟ್ಟಿಗರು ಒತ್ತಾಯಿಸಿದ್ದಾರೆ.
ಚಕ್ರವರ್ತಿ ಇದೇ ರೀತಿಯಾಗಿ ಕೆಟ್ಟದಾಗಿ ವರ್ತಿಸಿದರೆ ಅಂತಿಮ ಐವರು ಸ್ಪರ್ಧಿಗಳಲ್ಲಿ ಅವರಿಗೆ ಅವಕಾಶವೇ ಇರುವುದಿಲ್ಲ. ಹೀಗಾಗಿ ಆಟದ ಮೇಲೆ ಮಾತ್ರ ಗಮನಹರಿಸಲು ಹೇಳಿ, ವೈಯಕ್ತಿಕವಾಗಿ ಯಾರನ್ನು ಟಾರ್ಗೆಟ್ ಮಾಡದಿರಲಿ ಎಂದು ನೆಟ್ಟಿಗರು ಬುದ್ಧಿಮಾತು ಹೇಳಿದ್ದಾರೆ. (ಏಜೆನ್ಸೀಸ್)