

ಹೈದರಾಬಾದ್: ಸಾಮಾಜಿಕ ಜಾಲತಾಣದ ನಿರಂತರ ಬೆಳವಣಿಗೆಯ ಪರಿಣಾಮ ಇಂದಿನ ಯುವ ಜನಾಂಗ ಅಂತರ್ಜಾಲದಲ್ಲಿ ಹೆಚ್ಚು ಕಾಲವನ್ನು ಕಳೆಯುತ್ತಿದೆ. ಹಲವಾರು ವಿಧದ ಆ್ಯಪ್ಗಳನ್ನು ನೀವು ಜಾಲತಾಣದಲ್ಲಿ ನೋಡಿರುತ್ತೀರಾ. ಅದರಲ್ಲೂ ಡೇಟಿಂಗ್ ಆ್ಯಪ್ಗಳ ಸಂಖ್ಯೆಯೇನು ಕಡಿಮೆ ಇಲ್ಲ. ಬಹುತೇಕ ಡೇಟಿಂಗ್ ಆ್ಯಪ್ಗಳಲ್ಲಿ ನಕಲಿ ಪ್ರೊಫೈಲ್ಗಳನ್ನು ಅಥವಾ ಜಾಲತಾಣಿಗರನ್ನು ಸೆಳೆಯುವುದಕ್ಕಾಗಿ ನಟಿಯರ ಚಿತ್ರಗಳನ್ನು ಬಳಸುತ್ತಾರೆ.
ಆಘಾತಕಾರಿ ವಿಚಾರವೆಂದರೆ ಲೈಂಗಿಕತೆಯ ಭರವಸೆ ನೀಡುವ ಕೆಲವು ಡೇಟಿಂಗ್ ಅಪ್ಲಿಕೇಶನ್‌ಗಳು ಈಗ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇತ್ತೀಚೆಗೆ ಇಂತಹ ಆ್ಯಪ್ಗಳಲ್ಲಿ ಬಾಹುಬಲಿ ಸಿನಿಮಾದಲ್ಲಿ ಅಭಿನಯಿಸಿರುವ ನಟಿಯ ಚಿತ್ರಗಳು ಅಪ್ಲೋಡ್ ಆಗಿದ್ದು, ನಟಿಯ ಬೇಸರಕ್ಕೆ ಕಾರಣವಾಗಿದೆ.
ಆಶ್ರಿತಾ ವೇಮುಗಂತಿ ನಿಮಗೆ ನೆನಪಿರಬೇಕಲ್ಲವೇ? ಬಾಹುಬಲಿ ಎರಡನೇ ಭಾಗದಲ್ಲಿ ನಟಿ ಅನುಷ್ಕಾ ಅವರ ಅತ್ತಿಗೆ ಪಾತ್ರ ಮಾಡಿದ್ದಾರೆ. ಅಲ್ಲದೆ, ಯಾತ್ರಾ ಸಿನಿಮಾದಲ್ಲಿ ವೈ.ಎಸ್. ವಿಜಯಮ್ಮಳಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಶೇಡಿ ಡೇಟಿಂಗ್ ಅಪ್ಲಿಕೇಶನ್‌ನ ಜಾಹೀರಾತು ಕಾಣಿಸಿಕೊಂಡಿತು, ಆ ಆ್ಯಪ್ನಲ್ಲಿ ಆಶ್ರೀತಾ ವೇಮುಗಂತಿ ಅವರ ಫೋಟೋವನ್ನು ಪ್ರೊಫೈಲ್ ಚಿತ್ರವಾಗಿ ಇರಿಸಲಾಗಿದೆ. ಇಂತಹ ಹಲವು ಪೋಸ್ಟ್‌ಗಳಿಂದ ಆಘಾತಕ್ಕೊಳಗಾದ ಆಶ್ರಿತಾ, ಇದೀಗ ಕಾನೂನು ಮಾರ್ಗದಲ್ಲಿ ಹೋಗಿ ಆ ಡೇಟಿಂಗ್ ಆಪ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಇದೇ ಮಾದರಿಯಲ್ಲಿ ಅನೇಕ ನಟಿಯರ ಚಿತ್ರಗಳನ್ನು ಸಹ ಬಳಸಲಾಗುತ್ತಿದೆ ಮತ್ತು ಅಂತಹ ದುಷ್ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ಜಾರಿಯಲ್ಲಿರಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ. (ಏಜೆನ್ಸೀಸ್)