ಚೀನಾ ಆಟಿಕೆ ಆಪತ್ತು: ಮಕ್ಕಳ ಅನ್ನನಾಳ, ಶ್ವಾಸಕೋಶಕ್ಕೆ ಅಪಾಯಕಾರಿ; ಕ್ಯಾನ್ಸರ್ ಸಾಧ್ಯತೆ..

Front
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕಡಿಮೆ ಬೆಲೆ, ನೋಡಲು ಆಕರ್ಷಕವಾಗಿದೆ ಎಂಬ ಕಾರಣಕ್ಕೆ ಚೀನಾ ಆಟಿಕೆಗಳನ್ನು ಖರೀದಿಸಿ, ಮಕ್ಕಳ ಕೈಗಿಡುವ ಮುನ್ನ ಎಚ್ಚರ. ಇದರಿಂದ ಕ್ಯಾನ್ಸರ್​ನಂಥ ಗಂಭೀರ ಕಾಯಿಲೆಗಳೂ ಬರಬಹುದು! ಚೀನಾ ಆಟಿಕೆಗಳಲ್ಲಿ ಅತಿಯಾದ ರಾಸಾಯನಿಕ ಬಳಸುತ್ತಿರುವುದು ಇದಕ್ಕೆ ಕಾರಣ. ಚೀನಾ ಆಟಿಕೆಗಳು ಕಳಪೆಯಾಗಿದ್ದು, ಮಕ್ಕಳ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಇವು ಅಪಾಯಕಾರಿ ರಾಸಾಯನಿಕ ಅಂಶ ಹೊಂದಿವೆ ಎಂದು ಅಮೆರಿಕ ಹೇಳಿದ್ದು, ಇವುಗಳಿಗೆ ನಿರ್ಬಂಧ ವಿಧಿಸಿದೆ. ಇಂಥ ಆಟಿಕೆಗಳು ಭಾರತದ ಮಾರುಕಟ್ಟೆ ತುಂಬ ಆವರಿಸಿರುವುದು ಆತಂಕ ಮೂಡಿಸಿದೆ. ಕೇಂದ್ರ ಸರ್ಕಾರದ 2018-19ನೇ ಸಾಲಿನ ವರದಿ ಪ್ರಕಾರ ದೇಶದಲ್ಲಿ ಮಕ್ಕಳ ಆಟಿಕೆಗಳ 10 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಈ ಪೈಕಿ ಶೇ.70 ಚೀನಾ ಆಟಿಕೆ ಆಗಿದೆ. ಉಳಿದ ಶೇ.20 ದೇಶಿ ಮತ್ತು ಶೇ.10 ಇತರ ದೇಶದಿಂದ ಬಂದಂಥವು. ಭಾರತದಲ್ಲಿ ಸುಮಾರು 20 ವರ್ಷಗಳಿಂದ ಚೀನಾ ಆಟಿಕೆಗಳ ದರ್ಬಾರು ಹೆಚ್ಚಾಗಿದೆ.

ಅಪಾಯ ಹೇಗೆ?: ಹೊಳಪು ಬರಲು ಆಟಿಕೆಗಳಿಗೆ ಸೀಸ, ಬೇರಿಯಂ, ಕಾಡ್ಮಿಯಂನಂತಹ ವಿಷಕಾರಿ ರಾಸಾಯನಿಕಗಳನ್ನು ವಿಪರೀತವಾಗಿ ಲೇಪಿಸಲಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಇದು ಮಾರಕ ಪರಿಣಾಮ ಬೀರಲಿದೆ. ಆಟಿಕೆ ಖರೀದಿಸುವಾಗ ಎಚ್ಚರ ವಹಿಸುವಂತೆ ಅಮೆರಿಕದ ಸೀಮಾ ಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಇಲಾಖೆ ಎಚ್ಚರಿಕೆ ನೀಡಿದೆ. ಆಟಿಕೆಗಳ ತಯಾರಿಸಲು ಮಕ್ಕಳ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಮಕ್ಕಳ ಆಟಿಕೆ ಬಿಡಿ ಭಾಗದಿಂದ ಕೂಡಿರಬಾರದು. ಗುಣಮಟ್ಟದ ಕಚ್ಚಾವಸ್ತು ಬಳಸಿ ತಯಾರಿಸಬೇಕು. ಆದರೆ ಚೀನಾ ಕಂಪನಿಗಳು ಕಳಪೆ ಪ್ಲಾಸ್ಟಿಕ್, ಬಣ್ಣ, ಬ್ಯಾಟರಿ ಮತ್ತು ಬಿಡಿ ಭಾಗಗಳನ್ನು ಬಳಸುತ್ತಿವೆ. ಕಡಿಮೆ ಬೆಲೆ ಕಾರಣಕ್ಕೆ ಈ ಆಟಿಕೆಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿ ಮಾಡುತ್ತಾರೆ.ಇದರಿಂದ ಮಕ್ಕಳ ಆರೋಗ್ಯ, ಪರಿಸರ ಮಾಲಿನ್ಯ ಮತ್ತು ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುತ್ತಾರೆ, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ನಿಜಗುಣ.

ಆಟಿಕೆ ಮಕ್ಕಳ ವಿಕಾಸಕ್ಕೆ ಸಹಾಯ ವಾಗುವಂತೆ ಇರಬೇಕು. ವಯಸ್ಸಿಗೆ ತಕ್ಕಂತೆ ಬುದ್ಧಿಶಕ್ತಿ, ಭೌತಿಕ ಶಕ್ತಿ, ಚಾತುರ್ಯ ಮತ್ತು ದೇಹದ ಅಂಗಾಂಗ ಹೊಂದಾಣಿಕೆ ಆಗುವಂತಹ ಆಟಿಕೆ ಆಯ್ಕೆ ಮಾಡಿಕೊಳ್ಳಬೇಕು. | ಡಾ. ನಿಜಗುಣ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಮಕ್ಕಳ ತಜ್ಞ

ಚಿಣ್ಣರಿಗೆ ಯಾವ ಆಟಿಕೆ ಒಳಿತು?

ಮಕ್ಕಳ ಸುರಕ್ಷತಾ ಮಾರ್ಗಸೂಚಿ ಪಾಲಿಸಿ ತಯಾರಾಗುವ ಆಟಿಕೆ ಬಳಕೆ ಉತ್ತಮ. ಬಿಡಿಭಾಗಗಳಿಲ್ಲದೆ ಒಂದೇ ಭಾಗದಿಂದ ತಯಾರಾಗಿರಗಿಬೇಕು. ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಆಟಿಕೆಯು ಮಕ್ಕಳ ವಿಕಸನಕ್ಕೆ ಬುದ್ಧಿಶಕ್ತಿ, ಭೌತಿಕ ಶಕ್ತಿ ಮತ್ತು ಚತುರತೆ ಬೆಳವಣಿಗೆಗೆ ಅನುಕೂಲ ಆಗುವಂತಿರಬೇಕು. ದುಬಾರಿ ಆದರೂ ಗುಣಮಟ್ಟದ ಆಟಿಕೆ ಬಳಕೆ ಒಳ್ಳೆಯದು. ಮಕ್ಕಳು ತಮ್ಮ ಸುತ್ತಲ ಪ್ರದೇಶದಲ್ಲಿ ಟಾಯ್್ಸ ಕ್ಲಬ್ ಎಂದು ರಚನೆ ಮಾಡಿಕೊಂಡು ಆಟಿಕೆಗಳನ್ನು ಅದಲುಬದಲು ಮಾಡಿಕೊಂಡರೆ ದುಂದುವೆಚ್ಚ ತಪ್ಪಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಸ್ವದೇಶಿ ಜಾಗೃತಿ ಮೂಡಲಿ: ವರ್ಷಕ್ಕೆ 10 ಸಾವಿರ ಕೋಟಿ ರೂ. ವಹಿವಾಟು ನಡೆಯುವ ಮಕ್ಕಳ ಆಟಿಕೆ ಉದ್ಯಮದಲ್ಲಿ ಸ್ವದೇಶಿ ಜಾಗೃತಿ ಮೂಡಬೇಕಿದೆ. ಆಟಿಕೆ ಮಾರುಕಟ್ಟೆ ಆವರಿಸಿರುವ ಚೀನಾ ಉತ್ಪನ್ನ ಬದಲು ಸಾಂಪ್ರದಾಯಿಕ, ಗುಣಮಟ್ಟದ, ಅಡ್ಡಪರಿಣಾಮ ಬೀರದ ಚನ್ನಪಟ್ಟಣ ಮತ್ತು ಕೊಪ್ಪಳ ಜಿಲ್ಲೆಯ ಕಿನ್ನಾಳ ಆಟಿಕೆಯಂಥವುಗಳ ಬಳಕೆ ಕುರಿತು ಸ್ವದೇಶಿ ಜಾಗೃತಿ ಮೂಡಬೇಕು. ಇದರಿಂದ ದೇಶದ ಗುಡಿ ಕೈಗಾರಿಕೆಗೂ ಪ್ರೋತ್ಸಾಹ ದೊರೆಯುತ್ತದೆ. ಇದು ಮಕ್ಕಳಿಂದಲೇ ಶುರುವಾದರೆ ಲೇಸು.

ಪರಿಸರ ಮಾಲಿನ್ಯ: ಪರಿಸರ ಮಾಲಿನ್ಯ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲಾಗುತ್ತಿದೆ. ಆದರೆ, ಚೀನಾ ಆಟಿಕೆಗಳು ಪ್ಲಾಸ್ಟಿಕ್​ನಿಂದ ಕೂಡಿದ್ದು, ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಕೆಲವೇ ದಿನಕ್ಕೆ ಕಿತ್ತು ಹೋಗುವ ಕಾರಣ ಅನುಪಯುಕ್ತ ವಸ್ತುವೆಂದು ಎಸೆಯಲಾಗುತ್ತದೆ. ಪರಿಣಾಮ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಚನ್ನಪಟ್ಟಣ ಮತ್ತು ಕೊಪ್ಪಳ ಜಿಲ್ಲೆಯ ಕಿನ್ನಾಳದ ಆಟಿಕೆಗಳನ್ನು ಮರದಿಂದ ಮಾಡಲಾಗುತ್ತದೆ. ಇವನ್ನು ದೀರ್ಘಕಾಲ ಬಳಸಬಹುದು ಮತ್ತು ಪರಿಸರ ಮಾಲಿನ್ಯದ ಅಪಾಯ ಇಲ್ಲ.

ಏನೆಲ್ಲ ಕಾಯಿಲೆ ಬರುತ್ತೆ?: ಅತಿಯಾದ ರಾಸಾಯನಿಕ ಬಳಸಲಾದ ಚೀನಾ ಆಟಿಕೆಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಕ್ಯಾನ್ಸರ್, ಚರ್ಮ ರೋಗ ಮತ್ತು ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಕಳಪೆ ಪ್ಲಾಸ್ಟಿಕ್, ರಾಸಾಯನಿಕ ವಸ್ತುಗಳಿಂದ ಕೂಡಿರುವ ಆಟಿಕೆಗಳನ್ನು ಮಕ್ಕಳು ರ್ಸ³ಸುವುದು ಅಥವಾ ಬಾಯಲ್ಲಿ ಇಟ್ಟುಕೊಂಡಾಗ ಕೆಮಿಕಲ್ ದೇಹದ ಒಳಗೆ ಸೇರುತ್ತದೆ. ಚರ್ಮ ರೋಗವೂ ಬರುವ ಸಾಧ್ಯತೆ ಇದೆ. ಚೀನಾ ಆಟಿಕೆಯಲ್ಲಿ ಬಳಸುವ ಬ್ಯಾಟರಿಗಳನ್ನು ಮಕ್ಕಳು ಆಕಸ್ಮಿಕವಾಗಿ ನುಂಗಿದರೆ ಅಲ್ಕಲೀನ್ ಕೆಮಿಕಲ್ ಅನ್ನನಾಳಕ್ಕೆ ಸೇರಿಕೊಂಡು ರಂಧ್ರ ಉಂಟಾಗಿ ಆಹಾರ ಸೇರುವುದಿಲ್ಲ. ಜತೆಗೆ ರಕ್ತನಾಳಕ್ಕೂ ಹೋಗಿ ಪ್ರಾಣಕ್ಕೆ ಅಪಾಯ ತರುವ ಸಾಧ್ಯತೆಗಳಿವೆ. ಇಂತಹ ಪ್ರಕರಣಗಳು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಎರಡು ತಿಂಗಳಿಗೆ ಒಂದು ದಾಖಲಾಗುತ್ತಿದೆ. ಚೀನಾ ಬಲೂನ್ ಮತ್ತು ವಿಕಿರಣ ಸೂಸುವ ಆಟಿಕೆಗಳಿಂದ ಮಕ್ಕಳ ಕಣ್ಣಿಗೆ ಆಪಾಯ ಕಟ್ಟಿಟ್ಟ ಬುತ್ತಿ. ನ್ಯುಮೋನಿಯಾದಂಥ ರೋಗ ಬರಬಹುದಾಗಿದ್ದು, ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಬೇಕೆಂಬುದು ವೈದ್ಯರ ಸಲಹೆ.

ಆಟಿಕೆಗಳಲ್ಲಿ ರಾಸಾಯನಿಕ ಬಳಕೆಯಿಂದ ಮಕ್ಕಳ ಚರ್ಮದ ಮೇಲೆ ದುಷ್ಪರಿಣಾಮ ವಾಗುತ್ತದೆ. ಆಟಿಕೆ ಕೊಡುವ ಮುನ್ನ ಅದರ ಗುಣಮಟ್ಟ ಪರೀಕ್ಷೆ ಒಳಿತು.| ಡಾ.ಎಂ.ಎಸ್. ಗಿರೀಶ್ ಚರ್ಮ ರೋಗ ತಜ್ಞರು, ಇಎಸ್​ಐ ಆಸ್ಪತ್ರೆಬಿಡಿಭಾಗ ನುಂಗುವ ಸಾಧ್ಯತೆಗಳಿವೆ: ಬಹುತೇಕ ಚೀನಾ ಆಟಿಕೆಗಳು ಬಿಡಿಭಾಗದಿಂದ ಕೂಡಿರುತ್ತವೆ. ಪ್ಲಾಸ್ಟಿಕ್ ತುಂಡುಗಳು, ನಟ್ಟು, ಬೋಲ್ಟ್, ಬ್ಯಾಟರಿ ಇನ್ನಿತರ ಬಿಡಿಭಾಗಗಳನ್ನು ಮಕ್ಕಳು ನುಂಗಿದರೆ ಅವರ ಪ್ರಾಣಕ್ಕೆ ಸಂಚಕಾರ ಉಂಟಾಗಬಹುದು. ಉಸಿರಾಟದ ತೊಂದರೆ ಯಾಗಿ ತುರ್ತು ಶಸ್ತ್ರಚಿಕಿತ್ಸೆ ಮಾಡಿ ಆಟಿಕೆ ಬಿಡಿಭಾಗ ಹೊರತೆಗೆಯುವ ಪರಿಸ್ಥಿತಿಯೂ ಎದುರಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net