ನಂಗೇನು ಕ್ವಾರಂಟೈನ್​ ಹೊಸದಲ್ಲ; ಸುದೀಪ್​ ಎಕ್ಸ್​ಕ್ಲೂಸಿವ್ ಮಾತು

sudeep
Published on

ಹೈದರಾಬಾದ್​ನಲ್ಲಿ ‘ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಸುದೀಪ್, ಲಾಕ್​ಡೌನ್ ಘೊಷಣೆಯಾಗುತ್ತಿದ್ದಂತೆಯೇ ಬೆಂಗಳೂರಿಗೆ ಬಂದು ಸೇರಿಕೊಂಡರು. ನಂತರ ಮೂರು ತಿಂಗಳುಗಳ ಕಾಲ ವರ್ಕೌಟ್, ಅಭಿಮಾನಿಗಳೊಂದಿಗೆ ವರ್ಚ್ಯುಯಲ್ ಮೀಟ್ ಎಂದು ಕಾಲ ಕಳೆದ ಅವರು, ಇದೀಗ ಮತ್ತೆ ಚಿತ್ರೀಕರಣಕ್ಕೆ ಹೋಗುವುದಕ್ಕೆ ಸಜ್ಜಾಗಿದ್ದಾರೆ. ಜುಲೈನಲ್ಲಿ ‘ಫ್ಯಾಂಟಮ್ ಚಿತ್ರೀಕರಣದಲ್ಲಿ ಮತ್ತೆ ಭಾಗವಹಿಸಲಿದ್ದಾರೆ. ಈ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು, ಭೂತ- ವರ್ತಮಾನ- ಭವಿಷ್ಯದ ಬಗ್ಗೆ ‘ವಿಜಯವಾಣಿ’ಯೊಂದಿಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಚೇತನ್ ನಾಡಿಗೇರ್ ಬೆಂಗಳೂರು

ಜುಲೈನಿಂದ ‘ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ತಯಾರಾಗು ತ್ತಿದ್ದಾರೆ ಸುದೀಪ್. ಕಳೆದ ವರ್ಷದ ಪೂರ್ತಿ ಆ ಭಾಷೆ, ಈ ಚಿತ್ರ ಎಂದು ಬ್ಯುಸಿಯಾಗಿದ್ದ ಸುದೀಪ್​ಗೆ, ಲಾಕ್​ಡೌನ್​ನಿಂದಾಗಿ ಮೂರು ತಿಂಗಳುಗಳ ಕಾಲ ಮನೆಯಲ್ಲಿರುವಂತಾಗಿದೆ. ಈ ಕ್ವಾರಂಟೈನ್ ಹೇಗಿತ್ತು, ಏನೆಲ್ಲಾ ಮಾಡಿದಿರಿ ಎಂದರೆ, ಅದೇನು ತಮಗೆ ಹೊಸದಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ನಂಗೇನು ಈ ಕ್ವಾರಂಟೈನ್ ಹೊಸದಲ್ಲ. ಯಾವುದೇ ಚಿತ್ರ ಮುಗಿದರೂ, 2 ತಿಂಗಳು ನಾನು ಏನೂ ಮಾಡುವುದಿಲ್ಲ. ನನ್ನ ಜತೆಗೆ ಸಮಯ ಕಳೆಯುವುದಕ್ಕೆ ಇಷ್ಟಪಡುತ್ತೇನೆ. ‘ಕೋಟಿಗೊಬ್ಬ 3’ ನಂತರ ಗ್ಯಾಪ್ ತೆಗೆದುಕೊಂಡಿರಲಿಲ್ಲ. ಅದಾದ ತಕ್ಷಣ, ‘ಫ್ಯಾಂಟಮ್ ಚಿತ್ರೀಕರಣಕ್ಕೆ ಹೊರಟುಬಿಟ್ಟೆ. ಕರೊನಾದಿಂದ ಒಂದು ನೆಪ ಸಿಕ್ಕಿತು. ಅಭ್ಯಾಸ ಇದ್ದುದರಿಂದ ನನಗೇನು ಲಾಕ್​ಡೌನ್​ನಿಂದ ಸಮಸ್ಯೆ ಆಗಲಿಲ್ಲ’ ಎನ್ನುತ್ತಾರೆ ಸುದೀಪ್.

ಬೇರೆಯವರ ಜತೆಗೆ ಹೋಲಿಸಿಕೊಳ್ಳಬೇಡಿ: ಎಲ್ಲಕ್ಕಿಂತ ಮುಖ್ಯವಾಗಿ ಬದಲಾಗುವುದಕ್ಕೆ ಮನಸ್ಥಿತಿ ಬೇಕು ಎಂಬುದು ಸುದೀಪ್ ನಂಬಿಕೆ. ‘ಎಲ್ಲರೂ ಮಾಡುವ ಒಂದು ದೊಡ್ಡ ತಪ್ಪು ಎಂದರೆ, ಬೇರೆಯವರ ಜತೆಗೆ ಹೋಲಿಸಿಕೊಳ್ಳುವುದು. ಮೊದಲು ನಾವು ನಮ್ಮ ಜತೆಗೆ ಹೋಲಿಸಿಕೊಳ್ಳಬೇಕು. ಹಿಂದೆ ನಾವು ಏನಾಗಿದ್ದೆವು, ಆ ದಿನಗಳಿಗೆ ಹೋಲಿಸಿದರೆ ಈಗ ಹೇಗಿದ್ದೇವೆ, ಈಗೆಷ್ಟು ಯಶಸ್ವಿಯಾಗಿದ್ದೇವೆ ಎಂದು ಕಂಪೇರ್ ಮಾಡಿಕೊಂಡರೆ, ಖುಷಿಯಾಗಬೇಕು. ನಾವು ಈಗೇನಾಗಿದ್ದೇವೋ, ಅದಕ್ಕೆ ತೃಪ್ತಿ ಇರಬೇಕು. ತೃಪ್ತಿ ಇಲ್ಲದಿದ್ದರೆ, ಕೊರಗುತ್ತಲೇ ಇರುತ್ತೇವೆ. ನಾನು ‘ತಾಯವ್ವ’ ಚಿತ್ರದಲ್ಲಿ ನಟಿಸುವಾಗ, ಮುಂದೊಂದು ದಿನ ನಾನು ಹೀಗಾಗಬಹುದು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇಷ್ಟು ದಿನ ಬರುತ್ತೀನಿ ಎಂದು ಯೋಚಿಸಿರಲಿಲ್ಲ. ಅಂದಿಗೆ ಹೋಲಿಸಿದರೆ, ಇಂದು ತುಂಬ ಗಳಿಸಿದ್ದೀನೆ. 24 ವರ್ಷಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ದೊಡ್ಡದೊಡ್ಡ ಹೀರೋಗಳ ಜತೆಗೆ ಅಭಿನಯಿಸಿದ್ದೇನೆ. ಆ ಬಗ್ಗೆ ತೃಪ್ತಿ ಇದೆ. ಇನ್ನೂ ಬೇಕು ಅಂತ ಕೊರಗಿದರೆ, ನಾವು ಏನು ಬೆಳೆದ ಹಾಗಾಯ್ತು. ನಾವು ಪ್ರಬುದ್ಧರಾಗೋದು ವಯಸ್ಸಿನಿಂದಲ್ಲ, ಇಂತಹ ಯೋಚನೆಗಳಿಂದ. ಹಾಗಾಗಿ ನೀವು ಏನು ಗಳಿಸಿದ್ದೀರೋ ಅದರಲ್ಲಿ ಖುಷಿಪಡಿ’ ಎಂದು ಹೇಳಲು ಸುದೀಪ್ ಮರೆಯುವುದಿಲ್ಲ.

ಪ್ರಕೃತಿಗೂ ವಿಶ್ರಾಂತಿ: ಸುದೀಪ್ ಹೇಳುವಂತೆ, ‘ಇದಕ್ಕೆಲ್ಲಾ ಕಾರಣ ನಾವು. ನಾನು, ನೀವು ಅಂತಲ್ಲ. ಇಡೀ ಮಾನವ ಜನಾಂಗವೇ ತುಂಬ ಮುಂದಕ್ಕೆ ಹೋಗಿಬಿಟ್ಟಿತ್ತು. ಒಂದಲ್ಲ ಒಂದು ಹಂತದಲ್ಲಿ ಸ್ವಲ್ಪ ಹಿಂದಕ್ಕೆ ಬರಬೇಕಿತ್ತು. ಈಗ ಕರೊನಾದಿಂದ ಆಗಿದೆ. ಇದರಿಂದ ತುಂಬ ಜನರಿಗೆ ತೊಂದರೆ ಆಗಿದೆ, ಹೌದು. ಆದರೆ, ಪ್ರಕೃತಿ ಸಹ ಎಷ್ಟು ತಡೆದುಕೊಳ್ಳುವುದಕ್ಕೆ ಸಾಧ್ಯ? ಕರೊನಾದಿಂದ ಎಲ್ಲರಿಗೂ ಪಾಠ ಕಲಿಸಿದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇದು ಯಾವತ್ತಾದರೂ ಒಂದು ದಿನ ಆಗಲೇಬೇಕಿತ್ತು. ಕರೊನಾ ಹೆಸರಿನಲ್ಲಿ ಆಗಿದೆ ಅಷ್ಟೇ’ ಎನ್ನುತ್ತಾರೆ ಸುದೀಪ್.

ದೇವಸ್ಥಾನಕ್ಕೆ ಹೋಗೋದ್ಯಾಕೆ?: ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಪರ್ಯಾಯವಾಗಿ ಓವರ್ ದಿ ಟಾಪ್ (ಓಟಿಟಿ) ಬೆಳೆಯಲಿದೆ ಎಂದು ಹೇಳಲಾಗುತ್ತಿದೆ. ಮುಂದೊಂದು ದಿನ ಓಟಿಟಿಯಿಂದ ಚಿತ್ರಮಂದಿರಗಳಿಗೆ ಸಮಸ್ಯೆ ಎದುರಾಗಲಿದೆಯಾ ಎಂಬ ಪ್ರಶ್ನೆ ಸುದೀಪ್ ಅವರ ಮುಂದಿಟ್ಟರೆ, ‘ಹೊಸ ಹೊಸ ಬದಲಾವಣೆಗಳು ಸಹಜ. ಆದರೆ, ಸಿನಿಮಾ ಅಂದರೆ ನನಗೆ ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು. ನಂತರ ಟಿವಿ, ಇಂಟರ್​ನೆಟ್ ಎಲ್ಲಾ. ಪ್ರತಿಯೊಬ್ಬರ ಮನೆಯಲ್ಲೂ ದೇವರಮೂರ್ತಿ ಇದ್ದೇ ಇರುತ್ತದೆ. ಆದರೂ ದೇವರನ್ನು ಹುಡುಕಿಕೊಂಡು ದೇವಸ್ಥಾನಕ್ಕೆ ಹೋಗೋದು ಯಾಕೆ. ನೆಮ್ಮದಿ ಸಿಗುತ್ತದೆ ಎಂಬ ಕಾರಣಕ್ಕೆ. ಇದು ಸಹ ಹಾಗೆಯೇ. ಎಷ್ಟೇ ಬೇರೆಬೇರೆ ಫ್ಲಾಟ್​ಫಾಮರ್್​ಗಳಿದ್ದರೂ, ಸಿನಿಮಾ ನೋಡಿದಂತಾಗುವುದು ಚಿತ್ರಮಂದಿರದಲ್ಲೇ. ಇದು ಬರೀ ಸಿನಿಮಾ ವಿಷಯ ಅಷ್ಟೇ ಅಲ್ಲ, ನಾಟಕ, ಯಕ್ಷಗಾನ ಸಹ ಹಾಗೆಯೇ. ಅವರನ್ನು ವೇದಿಕೆ ಮೇಲೆ ನೇರವಾಗಿ ನೋಡುವ ಸಂತೋಷವೇ ಬೇರೆ. ನಾವು ಸಿನಿಮಾ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ. ಬೇರೆ ಕಲೆಗಳ ಕಥೆ ಏನು? ಅದನ್ನು ನಂಬಿಕೊಂಡಿರುವ ಕಲಾವಿದರು ಏನು ಮಾಡಬೇಕು? ಅವರೆಲ್ಲಾ ಎಲ್ಲಿಗೆ ಹೋಗಬೇಕು? ನಮಗೇನೋ ಓಟಿಟಿ ಇದೆ. ಅವರಿಗೆ? ಹಾಗಾಗಿ ಇದೆಲ್ಲಾ ಬೇಗ ಸರಿ ಹೋಗಲಿ, ಎಲ್ಲವೂ ಮೊದಲಿನಂತಾಗಲಿ ಎಂದು ಪ್ರಾರ್ಥಿಸೋಣ’ ಎನ್ನುತ್ತಾರೆ ಸುದೀಪ್.

ಕಾಲ ಮತ್ತು ಸಮಯ ನಮ್ಮ ಕೈಲಿಲ್ಲ...: ಕರೊನಾ ನಮ್ಮೆಲ್ಲರಿಗೂ ಒಂದು ದೊಡ್ಡ ಪಾಠ ಎನ್ನುತ್ತಾರೆ ಸುದೀಪ್. ‘ಈ ಲಾಕ್​ಡೌನ್​ನಿಂದ ನಮಗೆ ಪ್ಲಾನಿಂಗ್ ಮತ್ತು ಸೇವಿಂಗ್ಸ್​ನ ಮಹತ್ವ ಅರ್ಥ ಆಗುತ್ತಿದೆ. ಕರೊನಾ ವಿಷಯ ಬಿಡಿ. ನಾಳೆ ಹುಷಾರಿಲ್ಲದೆ, ಎರಡು ತಿಂಗಳು ಹಾಸಿಗೆ ಹಿಡಿದರೆ, ಅದಕ್ಕೆ ನಾವು ತಯಾರಿದ್ದೀವಾ? ಎಷ್ಟೋ ಜನ ಆ ಬಗ್ಗೆ ಪ್ಲಾನ್ ಮಾಡಿರುವುದಿಲ್ಲ. ಈಗ ಇದೆಲ್ಲದರಿಂದ ನಾವು ಪ್ಲಾನ್ ಮಾಡುವಂತಾಗಿದೆ. ಪ್ರಕೃತಿಯ ಮುಂದೆ ನಮ್ಮ ಆಟ ಏನೂ ನಡೆಯುವುದಿಲ್ಲ, ನಿಜ. ಆದರೂ ನಾವು ಪ್ರಾಕ್ಟಿಕಲ್ ಆಗಿ ಯೋಚಿಸಬೇಕು. ಪ್ಲಾನಿಂಗ್ ಮತ್ತು ಸೇವಿಂಗ್ಸ್​ನ ಮಹತ್ವ ಅರ್ಥ ಮಾಡಿಕೊಳ್ಳಬೇಕು. ಸ್ವಲ್ಪ ಪ್ಲಾನ್ ಮಾಡಿದ್ದವರು, ಈ ಲಾಕ್​ಡೌನ್ ಸಮಯದಲ್ಲಿ ಬಚಾವ್ ಆದರು. ಇಲ್ಲದವರು ಕಷ್ಟಪಡುತ್ತಿದ್ದಾರೆ. ಹಾಗಾಗಿ ಭವಿಷ್ಯದ ಬಗ್ಗೆ ಯೋಚಿಸಬೇಕು. ಈಗ ಆಗಿದ್ದು ಆಗಿ ಹೋಗಿದೆ. ಅದನ್ನು ನಾವು ಒಪ್ಪಿಕೊಳ್ಳಬೇಕು. ಅಷ್ಟೇ ಅಲ್ಲ, ಮುಂದೆ ಬದಲಾಗಬೇಕು’ ಎನ್ನುತ್ತಾರೆ ಸುದೀಪ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net