

ನವದೆಹಲಿ: ಭಾರತದೊಂದಿಗಿನ ಹಿಂಸಾತ್ಮಕ ಸಂಘರ್ಷದ ಬಳಿಕ ಚೀನಾ ಭಾರಿ ಕುತಂತ್ರವನ್ನೇ ನಡೆಸಿದೆ. ಲಡಾಖ್ಗೆ ಹರಿಯುವ ಗಾಲ್ವಾನ್ ನದಿ ದಿಕ್ಕನ್ನೇ ಬದಲಿಸುತ್ತಿದೆ.
ಗಾಲ್ವಾನ್ ಕಣಿವೆ ಪ್ರದೇಶದ ಚಿತ್ರಣವನ್ನೇ ಬದಲಿಸಲು ಚೀನಾ ಭಾರಿ ಕಾಮಗಾರಿ ಕೈಗೆತ್ತಿಕೊಂಡಿದೆ. ಭಾರತ- ಚೀನಾ ಸಂಘರ್ಷಕ್ಕೂ ಮುನ್ನ ಈ ಪ್ರದೇಶದಲ್ಲಿ ಭಾರಿ ಯಂತ್ರೋಪಕರಣಗಳೇ ಇರಲಿಲ್ಲ. ಈಗ ಅವುಗಳು ಸಂಚಾರ ನಡೆಸುತ್ತಿರುವುದು ಸ್ಪಷ್ಟವಾಗಿ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.
ಕೆಲವೆಡೆ, ನದಿಯ ಪಾತ್ರವನ್ನು ಇನ್ನಷ್ಟು ಅಗಲ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ನದಿ ದಾಟಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಲಡಾಖ್ನತ್ತ ನೀರು ಹರಿಯದಂತೆ ಬೃಹತ್ ಬಂಡೆಗಳನ್ನು ನದಿಗೆ ಅಡ್ಡಲಾಗಿ ಹಾಕಿರುವುದು ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಗೊತ್ತಾಗುತ್ತಿದೆ.
ಈ ಪ್ರದೇಶದಲ್ಲಿ ಸಂಘರ್ಷಕ್ಕೂ ಮುನ್ನ ಇಂಥ ಚಟುವಟಿಕೆಗಳು ನಡದೇ ಇರಲಿಲ್ಲ ಎನ್ನುವುದು ಕೂಡ ಹಿಂದಿನ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಚಿತ್ರಗಳನ್ನು ನೋಡಿದರೆ, ಗಾಲ್ವಾನ್ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿರುವುದು ಗೊತ್ತಾಗುತ್ತದೆ. ಅಂದರೆ, ಅಲ್ಲಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಪ್ರದೇಶದಲ್ಲಿ ನೂರಾರು ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಚೀನಾ ಕಡೆಯಲ್ಲಿ ಇವುಗಳ ಸಂಚಾರ ಹೆಚ್ಚಾಗಿದೆ. ಭಾರತದ ಕಡೆಯಲ್ಲಿ 30-40 ವಾಹನಗಳೀದ್ದರೆ, ಚೀನಾ ಕಡೆಯಲ್ಲಿ ವಾಹನಗಳ ಸಂಖ್ಯೆ ನೂರಕ್ಕೂ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿರುವ ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯ ನಿರ್ದೇಶಕ ಜೆಫ್ರಿ ಲೂಯಿಸ್ ಹೇಳಿದ್ದಾರೆ.