ನಟ ಅಲ್ಲು ಅರ್ಜುನ್​ ಬಂಧನ ಪ್ರಕರಣ! ಪುಷ್ಪ ಚಿತ್ರತಂಡಕ್ಕೆ ಬಂಪರ್, ಫ್ಯಾನ್ಸ್​ ಫುಲ್​ ಖುಷ್​ | Allu Arjun

Allu Arjun
Published on

Allu Arjun ​: ಬಹುನಿರೀಕ್ಷಿತ ಪುಷ್ಪ-2 ಚಿತ್ರದ ಪ್ರೀಮಿಯರ್​ ಶೋ ವೇಳೆ ಹೈದರಾಬಾದ್​ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತದಲ್ಲಿ ರೇವತಿ ಎಂಬಾಕೆ ಮೃತಪಟ್ಟಿದ್ದಕ್ಕೆ ನಟ ಅಲ್ಲು ಅರ್ಜುನ್​ ಅವರನ್ನು ಡಿ.13ರಂದು ಪೊಲೀಸರು ಬಂಧಿಸಿದ್ದರು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಯಿತು ಮತ್ತು ಅನೇಕರು ಅಲ್ಲು ಅರ್ಜುನ್​ ಪರ ನಿಂತರು. ಬಂಧನವಾದ 24 ಗಂಟೆಯೊಳಗೆ ಜಾಮೀನು ಪಡೆದು ಜೈಲಿನಿಂದಲೂ ಬಿಡುಗಡೆಯಾದರು.

ಪ್ರೀಮಿಯರ್​ ಶೋ ವೇಳೆ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್​ ಭೇಟಿ ನೀಡಿದರು. ಈ ವೇಳೆ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿದ ರೇವತಿ ಮೃತಪಟ್ಟರು. ಚಿತ್ರಮಂದಿರಕ್ಕೆ ಭೇಟಿ ನೀಡುವ ವೇಳೆ ಅಲ್ಲು ಅರ್ಜುನ್​ ಅವರು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಹೈದರಬಾರದ್​​ ಪೊಲೀಸರು ನೇರವಾಗಿ ಅಲ್ಲು ಅರ್ಜುನ್​ ಮನೆಗೆ ಹೋಗಿ ಬಂಧನ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬಂಧನದ ಬಳಿಕ ಅಧೀನ ನ್ಯಾಯಾಲಯ ಅಲ್ಲು ಅರ್ಜುನ್​ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ, ಅಲ್ಲು ಅರ್ಜುನ್​ ಫ್ಯಾಮಿಲಿ ಹೈಕೋರ್ಟ್​ ಮೆಟ್ಟಿಲೇರಿ ಜಾಮೀನು ಪಡೆದುಕೊಂಡಿತು. ಆದಾಗ್ಯೂ ನಮಗೆ ಯಾವುದೇ ಆರ್ಡರ್​ ಬಂದಿಲ್ಲ ಎಂದು ಹೇಳಿ ಅಲ್ಲು ಅರ್ಜುನ್​ ಅವರನ್ನು ಪೊಲೀಸರು ಒಂದು ರಾತ್ರಿ ಜೈಲಿನಲ್ಲೇ ಇರಿಸಿಕೊಂಡು ಮಾರನೇ ದಿನ ಬಿಡುಗಡೆ ಮಾಡಿದರು.

ತಾಜಾ ಸಂಗತಿ ಏನೆಂದರೆ, ಅಲ್ಲು ಅರ್ಜುನ್​ ಬಂಧನ ಪ್ರಕರಣವೇ ಇದೀಗ ಪುಷ್ಪ ಚಿತ್ರತಂಡಕ್ಕೆ ಲಾಭವಾಗಿದೆ. ಅಲ್ಲು ಅರ್ಜುನ್ ಬಂಧನದ ನಂತರ ಪುಷ್ಪ-2 ಥಿಯೇಟರ್ ಕಲೆಕ್ಷನ್ ಶೇ.70ರಷ್ಟು ಹೆಚ್ಚಾಗಿದೆ ಎಂಬ ಅಂಕಿ ಅಂಶಗಳು ಹೊರ ಬರುತ್ತಿವೆ. ಇದುವರೆಗೆ ಚಿತ್ರ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಅಲ್ಲು ಅರ್ಜುನ್​ಗೆ ಇರುವ ಸ್ಟಾರ್ ಪವರ್ ಅನ್ನು ಸೂಚಿಸುತ್ತದೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದರೆ, ಬಂಧನ ಎಲ್ಲ ಒಂದು ನಾಟಕವಷ್ಟೇ, ಇದೆಲ್ಲವೂ ಕೇವಲ ಪ್ರಚಾರದ ಸ್ಟಂಟ್ ಎಂದು ಮತ್ತೊಂದಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಡಿ.5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net