

ಕಳೆದ ವರ್ಷ ದಕ್ಷಿಣದಿಂದ ದಂಡೆತ್ತಿ ಹೋಗಿ ಬಾಲಿವುಡ್ ಬಾಕ್ಸ್-ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಚಿತ್ರ ‘ಪುಷ್ಪ 1 - ದಿ ರೈಸ್’. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಗೆ ಬಂದಿತ್ತು. ಅದರಲ್ಲಿ ಹಿಂದಿ ಭಾಷೆಯೊಂದರಲ್ಲೇ ನೂರು ಕೋಟಿಗೂ ಹೆಚ್ಚು ಗಳಿಕೆ ಆಗುವ ಮೂಲಕ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಯಶಸ್ಸಿನ ಬಳಿಕ ಚಿತ್ರದ ಸೀಕ್ವಲ್ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರುವುದು ತಡವಾಗಿ, ಇದೀಗ ಸೋಮವಾರ ಸರಳ ಪೂಜೆಯ ಮೂಲಕ ಸಿನಿಮಾ ಸೆಟ್ಟೇರಿದೆ. ನಾಯಕ ನಟ ಅಲ್ಲು ಅರ್ಜುನ್ ಗೈರಿನ ನಡುವೆಯೇ ‘ಪುಷ್ಪ 2 - ದಿ ರೂಲ್’ ಸೆಟ್ಟೇರಿದೆ.
‘ಪುಷ್ಪ 2’ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ವಿುಸುವುದಕ್ಕೆ ಮೈತ್ರಿ ಮೂವಿ ಮೇಕರ್ಸ್ ಮುಂದಾಗಿದ್ದು, ನಿರ್ದೇಶಕ ಸುಕುಮಾರ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸದ್ಯ ಸೀಕ್ವಲ್ನಲ್ಲಿ್ಲ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಜತೆಗೆ ದಕ್ಷಿಣ ಭಾರತದ ಹಾಗೂ ಬಾಲಿವುಡ್ನ ದಿಗ್ಗಜರು ನಟಿಸುವ ನಿರೀಕ್ಷೆಯಿದೆ. ಸೋಮವಾರ ಪೂಜೆಯಷ್ಟೇ ನೆರವೇರಿದ್ದು, ಚಿತ್ರೀಕರಣ ಯಾವಾಗ ಪ್ರಾರಂಭ ಎನ್ನುವುದರ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. -ಏಜೆನ್ಸೀಸ್
ಅಮೆರಿಕಾದಲ್ಲಿ ಅಲ್ಲು ಅರ್ಜುನ್: ‘ಪುಷ್ಪ 2’ ಚಿತ್ರದ ಮುಹೂರ್ತಕ್ಕೆ ನಾಯಕ ಅಲ್ಲು ಅರ್ಜುನ್ ಗೈರಾಗುವುದಕ್ಕೂ ಕಾರಣವಿದೆ. ನ್ಯೂಯಾರ್ಕ್ನಲ್ಲಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂಡಿಯಾ ಡೇ ಪೆರೇಡ್ನಲ್ಲಿ ಅವರು ಅತಿಥಿಯಾಗಿದ್ದರು. ಭಾನುವಾರ ನಡೆದ ಮೆರವಣಿಗೆಯಲ್ಲಿ ಅಲ್ಲು ಅರ್ಜುನ್ ಗ್ರ್ಯಾಂಡ್ ಮಾರ್ಷಲ್ ಆಗಿದ್ದರು. ಮ್ಯಾಡಿಸನ್ ಅವೆನ್ಯೂ ಮಾರ್ಗದುದ್ದಕ್ಕೂ ನಡೆದ ಈ ಮೆರವಣಿಗೆಯಲ್ಲಿ ಐದು ಲಕ್ಷಕ್ಕೂ ಅಧಿಕ ಜನ ಸೇರಿದ್ದರು.