ಪುಷ್ಪ 2 ಚಿತ್ರದ ಮೊದಲ ದಿನದ ಗಳಿಕೆ ಎಷ್ಟು? RRR, ಬಾಹುಬಲಿ, ಕೆಜಿಎಫ್​ ದಾಖಲೆಗಳನ್ನು ಮುರಿತಾ? Pushpa 2 Collections

Pushpa 2 Collections
Published on

Pushpa 2 Collections : ಐಕಾನ್​ ಸ್ಟಾರ್​ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ನಿನ್ನೆ (ಡಿ.05) ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹಿಂದಿನ ದಿನವೇ ಪ್ರೀಮಿಯರ್ ಶೋ ಕೂಡ ನಡೆದಿತ್ತು. ಈ ಚಿತ್ರ ಕಲೆಕ್ಷನ್‌ನಲ್ಲಿ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂಬ ಮಾತುಗಳು ಮೊದಲೇ ಕೇಳಿಬಂದಿತ್ತು. ಅದರಲ್ಲೂ ಮೊದಲ ದಿನದ ಕಲೆಕ್ಷನ್​ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು.

ರಾಜಮೌಳಿ ನಿರ್ದೇಶನದ RRR ಮೊದಲ ದಿನವೇ 223 ಕೋಟಿ ರೂ. ಕಲೆಕ್ಷನ್‌ಗಳೊಂದಿಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ. ಅದರ ನಂತರ ಬಾಹುಬಲಿ 2 ಮತ್ತು ಕಲ್ಕಿ ಸಿನಿಮಾಗಳಿವೆ. ಅಲ್ಲದೆ, ಕನ್ನಡದ ಕೆಜಿಎಫ್​ ಕೂಡ ಸೇರಿದೆ. ಇದೀಗ ಆ ದಾಖಲೆಯನ್ನು ಪುಷ್ಪ 2 ಚಿತ್ರ ಮುರಿದಿದೆ ಎಂದು ವರದಿಯಾಗಿದೆ.

ಚಿತ್ರತಂಡ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಅನ್ನು ಪ್ರಕಟಿಸಿಲ್ಲ. ಆದರೆ, ಸಿನಿಮಾ ವಿತರಕರು ಹಾಗೂ ಬಾಕ್ಸ್​ಆಫೀಸ್​ ಪಂಡಿತರ ಪ್ರಕಾರ ಪುಷ್ಪ 2 ಸುಮಾರು 300 ಕೋಟಿಯಿಂದ 320 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಅಂದರೆ, ನಿವ್ವಳ ಕಲೆಕ್ಷನ್ ಸುಮಾರು 170 ಕೋಟಿ ತಲುಪಿದೆ ಎಂದು ವರದಿಯಾಗಿದೆ. ಪುಷ್ಪ ಖಂಡಿತವಾಗಿಯೂ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಲಿದೆ ಎಂದು ಬಾಕ್ಸ್​ ಆಫೀಸ್​ ಪಂಡಿತರು ಹೇಳುತ್ತಾರೆ. ಅಲ್ಲದೆ, ಹಿಂದಿಯ ಜವಾನ್ ಮತ್ತು ಅನಿಮಲ್ ಸಿನಿಮಾಗಳ ಆರಂಭಿಕ ದಿನದ ಕಲೆಕ್ಷನ್ ಕೂಡ ಮುರಿಯಲಿದೆ. ಹಿಂದಿಯೊಂದರಲ್ಲೇ 100 ಕೋಟಿ ರೂ. ಕಲೆಕ್ಷನ್ ಬರಬಹುದು ಎಂದು ವರದಿಯಾಗಿದೆ.

ಪ್ರೀಮೀಯರ್​ ಶೋಗಳಿಂದ ಚಿತ್ರಕ್ಕೆ 10 ಕೋಟಿ ರೂಪಾಯಿ ಹರಿದು ಬಂದಿದೆ. ತೆಲುಗು ರಾಜ್ಯಗಳಲ್ಲಿ 120 ಕೋಟಿಗೂ ಹೆಚ್ಚು, ತಮಿಳಿನಲ್ಲಿ 10 ಕೋಟಿಗೂ ಹೆಚ್ಚು, ಕನ್ನಡದಲ್ಲಿ 2 ಕೋಟಿಗೂ ಹೆಚ್ಚು, ಮಲಯಾಳಂನಲ್ಲಿ 10 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ವಿದೇಶದಿಂದ 60 ಕೋಟಿ ಕಲೆಕ್ಷನ್ ಬರಬಹುದು. ಇದರೊಂದಿಗೆ ಬಾಹುಬಲಿ ಮತ್ತು ಆರ್‌ಆರ್‌ಆರ್‌ ಸಿನಿಮಾಗಳು ಸೃಷ್ಟಿಸಿದ್ದ ದಾಖಲೆಗಳನ್ನು ಪುಷ್ಪ ಮುರಿದಿದೆ. ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳ ದಾಖಲೆಗಳನ್ನೂ ಪುಷ್ಪ 2 ಅಳಿಸಿ ಹಾಕಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಏನು ಹೇಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಅಂದಹಾಗೆ ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ನಿನ್ನೆಯಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net