ಅಭಿಮಾನಿಗಳೇ ನಮ್ಮನೆ ದೇವ್ರು; ರಾಜ್ಯಾದ್ಯಂತ ಪುನೀತ್ ಪ್ರವಾಸ

Puneeth
Published on

ಬೆಂಗಳೂರು: ಇನ್ನೇನು ಏಪ್ರಿಲ್ 1ರಂದು ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರಲು ‘ಯುವರತ್ನ’ ಚಿತ್ರ ಸಿದ್ಧವಾಗಿದೆ. ಪ್ರಚಾರ ಕಾರ್ಯವನ್ನೂ ಅಷ್ಟೇ ಬಿರುಸಿನಿಂದ ಚಿತ್ರತಂಡ ಮಾಡುತ್ತಿದೆ. ‘ನಿಮ್ಮ ಊರಿಗೆ ನಿಮ್ಮ ಅಪು್ಪ’ ಕಾನ್ಸೆಪ್ಟ್​ನಲ್ಲಿ ಭಾನುವಾರದಿಂದಲೇ ರಾಜ್ಯ ಪ್ರವಾಸ ಆರಂಭವಾಗಿದ್ದು, ಎರಡನೇ ದಿನವಾದ ಸೋಮವಾರ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ‘ಪವರ್​ಸ್ಟಾರ್’ ಪುನೀತ್ ರಾಜಕುಮಾರ್ ಅವರನ್ನು ಕಂಡ ಸಾವಿರಾರು ಅಭಿಮಾನಿಗಳು ಪುಳಕಿತರಾದರು. ಮೊದಲಿಗೆ ಬಳ್ಳಾರಿಯ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ದೇವಿಯ ದರ್ಶನ ಪಡೆದ ಪುನೀತ್, ಬಳಿಕ ಅಭಿಮಾನಿಗಳತ್ತ ಕೈ ಬೀಸುತ್ತ ಎಂಟ್ರಿ ಕೊಟ್ಟರು. ಅವರ ಆಗಮನವಾಗುತ್ತಿದ್ದಂತೆ ಎರಡು ಜೆಸಿಬಿಗಳಿಂದ ಹೂವಿನ ಮಳೆಗೈದರು. ಬಳ್ಳಾರಿ ಜತೆಗಿನ ನಂಟನ್ನೂ ಬಿಚ್ಚಿಟ್ಟರು.

ಅದಾದ ಬಳಿಕ ನೇರವಾಗಿ ಮಧ್ಯಾಹ್ನದಷ್ಟೊತ್ತಿಗೆ ಕೋಟೆ ನಾಡು ಚಿತ್ರದುರ್ಗಕ್ಕೆ ‘ಯುವರತ್ನ’ ತಂಡ ಹಾಜರಿ ಹಾಕಿತು. ಅಲ್ಲಿನ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಪುನೀತ್ ಅವರನ್ನು ತುಂಬ ಹತ್ತಿರದಿಂದ ಕಣ್ತುಂಬಿಕೊಂಡರು. ಸಾಗರೋಪಾದಿಯಲ್ಲಿ ಹರಿದು ಬಂದಿದ್ದ ಜನರನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ತುಸು ಕಷ್ಟವೇ ಆಯಿತು. ಅಲ್ಲಿಂದ ಶಿರಾದಲ್ಲಿಯೂ ಅಪು್ಪ ಯೂಥ್ ಬ್ರಿಗೇಡ್ ಬಳಗದವರು ನೆಚ್ಚಿನ ನಟನನ್ನು ಅದ್ದೂರಿಯಾಗಿಯೇ ಬರಮಾಡಿಕೊಂಡರು. ಸೇಬು ಹಣ್ಣುಗಳಿರುವ ಬೃಹತ್ ಮಾಲೆಯನ್ನು ಅರ್ಪಿಸುವ ಮೂಲಕ ಅಭಿಮಾನ ಮೆರೆದರು. ಕಿಲೋ ಮೀಟರ್ ಗಟ್ಟಲೇ ಪುನೀತ್ ಅವರಿದ್ದ ವಾಹನವನ್ನು ಹಿಂಬಾಲಿಸಿ ಮತ್ತೆ ಬನ್ನಿ ಎಂದು ವಿದಾಯ ಹೇಳಿದರು. ತುಮಕೂರಿನ ಎಸ್​ಐಟಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿಯೂ ಅ ಭಿಮಾನಿಗಳದ್ದೇ ಕಲರವ. ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಶ್ರೀಗಳ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net