

ಬೆಂಗಳೂರು: ‘ಜೇಮ್ಸ್ ಎಂದಾಕ್ಷಣ ಇದು ಬಾಂಡ್ ಸಿನಿಮಾ ಅಲ್ಲ..’ ಎಂಬ ಸ್ಪಷ್ಟನೆ ನೀಡುತ್ತಲೇ ತಮ್ಮ ‘ಜೇಮ್ಸ್’ ಚಿತ್ರದ ಕುರಿತ ಹೆಚ್ಚಿನ ಮಾಹಿತಿಯನ್ನು ಗುಟ್ಟಾಗಿಯೇ ಇರಿಸಿಕೊಂಡರು ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್. ಕಿಶೋರ್ ಪತಿಕೊಂಡ ಅವರ ನಿರ್ಮಾಣದಲ್ಲಿ ‘ಭರಾಟೆ’ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಆಕ್ಷನ್-ಕಟ್ ಹೇಳಲಿರುವ ಈ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ನಡೆಯಿತು.‘ ಎರಡು ವರ್ಷಗಳ ಹಿಂದೆಯೇ ಈ ಚಿತ್ರದ ಬಗ್ಗೆ ಮಾತುಕತೆ ನಡೆದಿತ್ತು. ನಂತರ ನಾನು ಬೇರೆ ಸಿನಿಮಾಗಳಲ್ಲಿ ಬಿಜಿಯಾದೆ. ಚೇತನ್ ‘ಭರಾಟೆ’ಯಲ್ಲಿ ಬಿಜಿಯಾದರು. ಹಾಗಾಗಿ ಸಿನಿಮಾ ಟೇಕಾಫ್ ತಡವಾಯಿತು’ ಎಂಬ ವಿವರಣೆ ನೀಡಿದರು ಪುನೀತ್.
ಇನ್ನು ಎರಡು ವರ್ಷಗಳ ಹಿಂದೆಯೇ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಆಗಿರುವುದರಿಂದ ಕಥೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಸಿನಿಮಾದಲ್ಲಿ ತಮ್ಮ ಲುಕ್ ಕೂಡ ವಿಭಿನ್ನವಾಗಿರಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು. ಈ ಸಿನಿಮಾ ಯಾವ ಜಾನರ್, ‘ಟ್ರೇಡ್ ಮಾರ್ಕ್’ ಎಂಬ ಟ್ಯಾಗ್ಲೈನ್ ಕುರಿತ ವಿಶೇಷತೆ ಏನು? ಎಂಬ ಬಗ್ಗೆ ಅವರು ಹೆಚ್ಚಿನ ಮಾಹಿತಿ ಕೊಡಲು ನಿರಾಕರಿಸಿದರು. ‘ಈ ಸಿನಿಮಾಗೆ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಾಗುವುದು. ರಾಜ್ಯದ ಹಲವೆಡೆ ಮಾತ್ರವಲ್ಲದೆ ವಿದೇಶಗಳಲ್ಲೂ ಚಿತ್ರೀಕರಣ ನಡೆಸಲಾಗುವುದು. ನಾಯಕಿ ಹಾಗೂ ಇತರ ಪಾತ್ರವರ್ಗಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಒಟ್ಟಿನಲ್ಲಿ ಈ ವರ್ಷಾಂತ್ಯದೊಳಗೆ ಸಿನಿಮಾ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ’ ಎಂದು ವಿವರಣೆ ನೀಡಿದರು ನಿರ್ದೇಶಕ ಚೇತನ್ಕುಮಾರ್. ‘ಟಗರು’, ‘ಸಲಗ’ ಚಿತ್ರಕ್ಕೆ ಸಂಗೀತ ನೀಡಿರುವ ಚರಣ್ರಾಜ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಪುನೀತ್ ಅಭಿನಯದ ‘ಯುವರತ್ನ’ ಬಿಡುಗಡೆ ಆಗುತ್ತಿದ್ದಂತೆ ಈ ಚಿತ್ರದ ಶೂಟಿಂಗ್ ಬಿರುಸಾಗಿ ಸಾಗಲಿದೆ ಎನ್ನಲಾಗುತ್ತಿದೆ.