ಇಂದು ರಾಜಧಾನಿ ಬೆಂಗಳೂರಿನಲ್ಲಿ ಪುನೀತ್ ನಮನ

Puneeth
Published on

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಇಂದು ಅರಮನೆ ಮೈದಾನದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಈ ಕಾರ್ಯಕ್ರಮ ಆಯೋಜಿತವಾಗಿದ್ದು, ಚಿತ್ರರಂಗದವರಲ್ಲದೆ, ರಾಜಕೀಯ ಮತ್ತು ಸಮಾಜದ ಇತರ ಕ್ಷೇತ್ರಗಳ ಗಣ್ಯರು ಹಾಜರಾಗಲಿದ್ದಾರೆ.

‘ಪುನೀತ್ ನಮನ’ ಕಾರ್ಯಕ್ರಮ ಕ್ಕಾಗಿ ಕಲಾವಿದರ ಸಂಘ, ನಿರ್ದೇಶಕರ ಸಂಘ, ನಿರ್ವಪಕರ ಸಂಘ, ಪ್ರದರ್ಶಕರು ಮತ್ತು ವಿತರಕರು, ಚಲನಚಿತ್ರ ಕಾರ್ವಿುಕರ ಒಕ್ಕೂಟ ... ಹೀಗೆ ಕನ್ನಡ ಚಿತ್ರರಂಗದ ವಿವಿಧ ವಲಯಗಳು ಮತ್ತು ಅಂಗಸಂಸ್ಥೆಗಳು ಜತೆಯಾಗಲಿವೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟ-ನಟಿಯರು ಭಾಗವಹಿಸುವ ನಿರೀಕ್ಷೆ ಇದೆ. ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಬೇರೆ ಭಾಷೆಗಳ ಜನಪ್ರಿಯ ನಟರು ಸಹ ಭಾಗವಹಿಸುವ ನಿರೀಕ್ಷೆ ಇದೆ. ಮಲಯಾಳಂ ನಟ ಮಮ್ಮೂಟ್ಟಿ, ತಮಿಳು ನಟ ವಿಶಾಲ್, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವು ಜನಪ್ರಿಯ ನಟರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರಿನ ರಾಜವಂಶಸ್ಥರಾದ ಯದುವೀರ ಒಡೆಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಚಿತ್ರರಂಗದವರು ಮತ್ತು ಆಹ್ವಾನಿತರಿಗಷ್ಟೇ ಪ್ರವೇಶ ನೀಡಲಾಗುತ್ತದೆ. 1700 ಮಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇರುವುದರಿಂದ, ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಮತಿ ಇರುವುದಿಲ್ಲ. ಪುನೀತ್ ಅವರ ನೆನಪಿನಲ್ಲಿ ವಿ. ನಾಗೇಂದ್ರ ಪ್ರಸಾದ್ ವಿಶೇಷವಾದ ಹಾಡೊಂದನ್ನು ರಚಿಸಿದ್ದು, ಈ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಈ ಹಾಡನ್ನು ಪ್ರಸ್ತುತಪಡಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net