ವಿಜಯ್ ಇಲ್ಲದ ಪುಕ್ಸಟ್ಟೆ ಲೈಫು; ಸಂಚಾರಿ ಸ್ಮರಣೆಯಲ್ಲೇ ಟ್ರೇಲರ್ ಬಿಡುಗಡೆ

Pugsatte lifeu
Published on

ಬೆಂಗಳೂರು: ಮಧ್ಯದ ಸೀಟು ಮಾತ್ರ ಖಾಲಿ. ಮಿಕ್ಕಂತೆ, ವೇದಿಕೆಯ ಮೇಲಿದ್ದ ಎಲ್ಲ ಚೇರುಗಳು ಭರ್ತಿಯಾಗಿದ್ದವು. ಬಿ. ಜಯಶ್ರೀ, ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ಅಚ್ಯುತ್ ಕುಮಾರ್ ... ಹೀಗೆ ಹಲವರು ವೇದಿಕೆಯ ಮೇಲಿದ್ದರು. ಬಹುಶಃ ಸಂಚಾರಿ ವಿಜಯ್ ಇದ್ದಿದ್ದರೆ, ಆ ಕುರ್ಚಿ ಸಹ ಭರ್ತಿಯಾಗಿರುತ್ತಿತ್ತು. ಆದರೆ, ಅವರು ಈಗಿಲ್ಲ. ಹಾಗಾಗಿ, ಅವರ ನೆನಪಲ್ಲಿ ಅದೊಂದು ಕುರ್ಚಿ ಖಾಲಿ ಬಿಟ್ಟು, ಅವರನ್ನು ನೆನಪಿಸಿಕೊಳ್ಳುತ್ತಲೇ ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿತು ಆ ಚಿತ್ರತಂಡ.

ಈ ಸಂದರ್ಭದಲ್ಲಿ ಮಾತನಾಡಿದ ಬಿ. ಜಯಶ್ರೀ, ‘ಸಂಚಾರಿ ವಿಜಯ್ ಇಲ್ಲ ಎಂಬ ದುಃಖ ಬೇಡ. ಅವರೀಗ ಚೇತನವಾಗಿ ನಮ್ಮ ಜತೆಗೆ ಇದ್ದಾರೆ. ಅವರಿಲ್ಲ ಎಂದು ಸಂಕಟಪಟ್ಟರೆ, ಅವರ ಆತ್ಮಕ್ಕೆ ಸಮಾಧಾನ ಸಿಗುವುದಿಲ್ಲ’ ಎಂದು ಹೇಳಿದರು. ನಿರ್ದೇಶಕ ಅರವಿಂದ್ ಕುಪ್ಳೀಕರ್ ಅವರ ಜತೆಗಿನ ಒಡನಾಟವನ್ನು ಮೆಲುಕು ಹಾಕಿದರು. ರಂಗಾಯಣ ರಘು ಮಾತನಾಡಿ, ‘‘ನಾನು ಅವನಲ್ಲ ಅವಳು’ ಚಿತ್ರದ ಅಭಿನಯಕ್ಕಾಗಿ ವಿಜಯ್ಗೆ ಪ್ರಶಸ್ತಿ ಘೋಷಣೆಯಾದ ಹಿಂದಿನ ದಿನ, ರಾಷ್ಟ್ರಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೊಬ್ಬರು ನನಗೆ ಫೋನ್ ಮಾಡಿದ್ದರು. ಆ ಪಾತ್ರ ಮಾಡಿದ್ದು ತೃತೀಯಲಿಂಗಿಯೊಬ್ಬರಿಂದ ಮಾಡಿಸಲಾಗಿದೆಯಾ ಎಂದು ಕೇಳಿದ್ದರು. ಅಷ್ಟರ ಮಟ್ಟಿಗೆ ವಿಜಯ್ ಅವರ ನೈಜ ಅಭಿನಯ ಎಲ್ಲರನ್ನೂ ಸೆಳೆದಿತ್ತು. ಸಾಕಷ್ಟು ಸಮಸ್ಯೆಗಳನ್ನು ನೋಡಿದ್ದ ವಿಜಯ್, ಅವೆಲ್ಲವನ್ನೂ ಗೆದ್ದು ಬಂದಿದ್ದರು. ಆದರೆ, ಅಪಘಾತದಿಂದ ನಮ್ಮೆಲ್ಲರಿಂದ ದೂರವಾದರು’ ಎಂದರು.

‘ಪುಕ್ಸಟ್ಟೆ ಲೈಫು’ ಚಿತ್ರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ‘ಚಿತ್ರದಲ್ಲಿ ಬಹಳಷ್ಟು ರಂಗಭೂಮಿಯ ಕಲಾವಿದರು ಅಭಿನಯಿಸಿದ್ದರು. ಮೇಲಾಗಿ ಕನ್ನಡದ ವಾತಾವರಣ ಇರುವ ನನಗೂ ಅವಕಾಶ ಕೊಟ್ಟಿದ್ದರೆ, ಸಂಭಾವನೆ ಪಡೆಯದೆ ಚಿತ್ರದಲ್ಲಿ ಅಭಿನಯಿಸುತ್ತಿದೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಅರವಿಂದ್ ಕುಪ್ಳೀಕರ್, ನಿರ್ವಪಕ ನಾಗರಾಜ್ ಸೋಮಯಾಜಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net