ರಾಜ ರಾಜ ಚೋಳನ ಕಥೆ ಪಿಎಸ್ 1

Film
Published on

ಬೆಂಗಳೂರು: ‘ಪೊನ್ನಿಯಿನ್ ಸೆಲ್ವನ್ 1’. ಮಣಿರತ್ನಂ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ. ಕಲ್ಕಿ ಕೃಷ್ಣಮೂರ್ತಿ 1955ರಲ್ಲಿ ಬರೆದಿದ್ದ ಅದೇ ಹೆಸರಿನ ಕಾದಂಬರಿ ಆಧಾರಿಸಿದ ಚಿತ್ರ. ಇಂತಹ ಎಪಿಕ್ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿತ್ತು.

ಕೆಲವು ದಿನಗಳ ಹಿಂದಷ್ಟೇ ‘ಕೋಬ್ರಾ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ನಟ ವಿಕ್ರಮ್ ‘ಎಲ್ಲರಿಗೂ ನಮಸ್ಕಾರ, ಹೇಗಿದ್ದೀರಾ?’ ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸಿದರು. ‘ಒಂದು ಸಾವಿರ ವರ್ಷಗಳ ಹಿಂದಿನ ರಾಜ ರಾಜ ಚೋಳನ ಕುರಿತ ಚಿತ್ರವಿದು. ಮೂರು ಸಾವಿರ ದೇವಸ್ಥಾನ, ಐದು ಸಾವಿರ ಡ್ಯಾಮ್ಳನ್ನು ಕಟ್ಟಿದ್ದರಂತೆ. ಉತ್ತಮ ಆಡಳಿತ ನೀಡಿದ್ದ ರಾಜ. ಬಾಲಿ, ಚೀನಾ, ಕಾಂಬೋಡಿಯಾವರೆಗೂ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ಇಂತಹ ಒಂದು ತಂಡದಲ್ಲಿ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು’ ಎಂದರು. ಬಳಿಕ ಮಾತನಾಡಿದ ನಟ ಕಾರ್ತಿ, ‘ಕಾಲೇಜಿನಲ್ಲಿದ್ದಾಗ ಬೆಂಗಳೂರು ನಮಗೆ ನ್ಯೂಯಾರ್ಕ್ ನಂತೆ. ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಅಡ್ಡಾಡಿದ್ದೇನೆ. ದಕ್ಷಿಣದಿಂದ ‘ಕೆಜಿಎಫ್’ ಸೇರಿದಂತೆ ಹಲವು ಉತ್ತಮ ಸಿನಿಮಾಗಳು ಬಂದಿವೆ. ಮಣಿರತ್ನಂ ಅವರ 40 ವರ್ಷಗಳ ಕನಸು ಈ ಚಿತ್ರ. ಸುಮಾರು 30ರಿಂದ 40ರಷ್ಟು ನೈಜ ಘಟನೆಗಳಿಂದ ಕೂಡಿದೆ. ಉಪೇಂದ್ರ ಹಿನ್ನೆಲೆ ಧ್ವನಿ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ನಂತರ ಮಾತನಾಡಿದ ನಟಿ ತ್ರಿಷಾ, ‘ಈಗಿನ ಮಹಿಳೆಯರು ಪುರುಷರಿಗೆ ಸರಿಸಮರಾಗಿದ್ದಾರೆ ಅಂತೀವಿ. ಆದರೆ, ಸಾವಿರ ವರ್ಷಗಳ ಹಿಂದೆಯೇ ಈ ಸಮಾನತೆಯಿತ್ತು. ಹೀಗಾಗಿ ಹಿಂದಿನ ಕಾಲದ ಕಾಸ್ಟ್ಯೂಮ್ ತೊಟ್ಟು, ಇಂದಿನ ಕಥೆಯಲ್ಲಿ ನಟಿಸಿದ್ದೇನೆ ಅಂತನ್ನಿಸುತ್ತಿದೆ’ ಎಂದರು. ನಟಿ ಐಶ್ವರ್ಯಾ ಲಕ್ಷ್ಮೀ, ‘ನನಗೆ ಚಿತ್ರದಲ್ಲಿ ಮೊದಲ ಅವಕಾಶ ದೊರೆತಿದ್ದು, ಇದೇ ಬೆಂಗಳೂರಿಗೆ ಬಂದಿದ್ದಾಗ. ನನಗೆ ಬೆಂಗಳೂರು ಅದೃಷ್ಟದ ನಗರ’ ಎಂದು ಸಂತಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯ ಬಳಿಕ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಕೂಡ ನಡೆಯಿತು. ಚಿತ್ರದಲ್ಲಿ ಐಶ್ವರ್ಯಾ ರೈ, ಜಯಮ್ ರವಿ, ಶೋಭಿತಾ ಧುಲಿಪಲ, ಪ್ರಕಾಶ್ ರಾಜ್, ಪಾರ್ಥಿಭನ್, ವಿಕ್ರಮ್ ಪ್ರಭು ಪ್ರಮುಖ ತಾರಾಗಣದಲ್ಲಿದ್ದು, ಸೆ. 30ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net