

ಬೆಂಗಳೂರು: ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಮತ್ತು ‘ಕಿರಿಕ್ ಪಾರ್ಟಿ’ ಚಿತ್ರಗಳ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗುತ್ತಿರುವ ವಿಷಯ ಹೊಸದೇನಲ್ಲ. ಅದಕ್ಕಾಗಿಯೇ ಕೆಲವು ತಿಂಗಳಿಂದ ಸದ್ದಿಲ್ಲದೆ ಅವರು ತಯಾರಿ ನಡೆಸಿದ್ದರು. ಈಗ ಅವರು ನಾಯಕನಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ನಾಳೆ ಭಾನುವಾರ (ಫೆ.06) ನಡೆಯಲಿದ್ದು, ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ಹೆಸರಿಡದ ಅಥವಾ ಹೆಸರು ಘೋಷಣೆಯಾಗದ ಚಿತ್ರದಲ್ಲಿ ಪುಷ್ಕರ್, ಸ್ಟಾರ್ನಟನಾಗಿ ಕಾಣಿಸಿಕೊಳ್ಳುತ್ತಿದ್ದರಂತೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಈ ಚಿತ್ರದಲ್ಲಿ ನಾನು ಒಬ್ಬ ದುರಹಂಕಾರಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೇಕಪ್ನಿಂದ ಅವನಿಗೆ ಚರ್ಮರೋಗ ಶುರುವಾಗುತ್ತದೆ. ಎಷ್ಟು ಚಿಕಿತ್ಸೆ ಪಡೆದರೂ ಸರಿ ಹೋಗುವುದಿಲ್ಲ. ಕೊನೆಗೆ ಕೌ ಥೆರಪಿ ಮೂಲಕ ಸರಿ ಮಾಡಬಹುದು ಎಂದು ಗೊತ್ತಾಗುತ್ತದೆ. ಚಿಕಿತ್ಸೆ ಪಡೆಯುವುದಕ್ಕೆಂದು ಊರು ಬಿಟ್ಟು, ಪ್ರಕೃತಿಯತ್ತ ಹೋಗುತ್ತಾನೆ. ಅಹಂಕಾರ ಬಿಟ್ಟು ಹಸುವಿನ ಜತೆಗೆ ಜೀವನ ನಡೆಸುತ್ತಾನೆ. ಆ ಭಾವನಾತ್ಮಕ ಕಥೆಯನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪುಷ್ಕರ್.
‘ಕಪೂರ್ ಆಂಡ್ ಸನ್ಸ್’ ಮುಂತಾದ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿರುವ ಕನ್ನಡಿಗ ಆದಿತ್ಯ ಗುಣವಂತೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕುದುರೆಮುಖ ಬಳಿಯ ಮಾಳ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.