

ಬೆಂಗಳೂರು: ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ 'ಪಾದರಾಯ' ಚಿತ್ರದಲ್ಲಿ ನಾಗಶೇಖರ್ ನಾಯಕನಾಗಿ ನಟಿಸಬೇಕಿತ್ತು. ಈಗ ಈ ಚಿತ್ರ ಪ್ರಾರಂಭವಾಗುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪಕ್ಷ ಆದರೂ ಅದರಲ್ಲಿ ನಾಗಶೇಖರ್ ಇರುವುದಿಲ್ಲ. ಇನ್ನು, ಜಾಕ್ ಮಂಜು ಅವರು ಈಗಾಗಲೇ ಚಿತ್ರತಂಡದಿಂದ ಹೊರನಡೆದಿದ್ದಾರೆ. ಚಿತ್ರ ಪ್ರಾರಂಭವಾದರೂ, ಅದು ಚಕ್ರವರ್ತಿ ಚಂದ್ರಚೂಡ್ ವಿವೇಚನೆಗೆ ಬಿಟ್ಟ ತಂಡದೊಂದಿಗೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇಷ್ಟಕ್ಕೂ ಆಗಿದ್ದೇನು? ಎಂಬ ಪ್ರಶ್ನೆ ಬರಬಹುದು.
ಈ ವಿಷಯವಾಗಿ ಚಂದ್ರಚೂಡ್ ಒಂದು ಸುಧೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ ಚಿತ್ರ ಘೋಷಣೆಯಾದ ಮೇಲೆ ಏನೆಲ್ಲಾ ಆಯಿತು ಎಂಬುದನ್ನು ವಿವರಿಸಿದ್ದಾರೆ. ಅವರು ಹೇಳುವಂತೆ ಚಿತ್ರದ ಘೋಷಣೆಯಾದರೂ, ಯಾವುದೇ ಒಪ್ಪಂದಗಳಾರಲಿಲ್ಲವಂತೆ. ಅಷ್ಟೇ ಅಲ್ಲ, ಯಾರಿಗೂ ಮುಂಗಡವನ್ನೂ ನೀಡಿರಲಿಲ್ಲವಂತೆ. ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು, ತಾನು ಈ ಚಿತ್ರ ನಿರ್ಮಿಸುತ್ತಿಲ್ಲ ಎಂದು ಮೌಖಿಕವಾಗಿ ಚಂದ್ರಚೂಡ್ ಮತ್ತು ನಾಗಶೇಖರ್ ಅವರಿಗೂ ಸ್ಪಷ್ಟಪಡಿಸಿದ್ದರಂತೆ.
ಈ ನಡುವೆ ನಿರ್ಮಾಪಕ - ನಿರ್ದೇಶಕರಾದ ಆರ್ ಚಂದ್ರು ಚಿತ್ರ ನಿರ್ಮಿಸುವುದಾಗಿ ಮೌಖಿಕವಾಗಿ ಹೇಳಿದರೂ, ಅವರೂ ಯಾವುದೇ ಒಪ್ಪಂದ ಮಾಡಿಕೊಳ್ಳಲಿಲ್ಲವಂತೆ. ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು,ನಾಗಶೇಖರ್ ಅವರಿಗೆ ವ್ಯಯಕ್ತಿಕವಾಗಿ 2.40 ಲಕ್ಷ ಹಣ ಕೊಟ್ಟಿರುವ ದಾಖಲೆ ಹಿಡಿದುಕೊಂಡು ಬಂದು ತಾವೇ ಈ ಚಿತ್ರದ ನಿರ್ಮಾಪಕ ಎಂದು ಸುದ್ದಿ ಹಬ್ಬಿಸಿದರಂತೆ. ಅಷ್ಟೇ ಅಲ್ಲದೇ, ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ ಎಂದು ಹೇಳಿದರಂತೆ. 'ಈ ಕಥೆ ಮತ್ತು ಸಿನಿಮಾದ ಹಕ್ಕು ಸಂಪೂರ್ಣ ನನ್ನದೇ ಆಗಿರುತ್ತದೆ. ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ' ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿಕೊಂಡಿದ್ದಾರೆ.
'ನಾನು ಮುಂದಿನ ದಿನಗಳಲ್ಲಿ 'ಪಾದರಾಯ' ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ಅದರಲ್ಲಿ ನಾನೇ ನಟಿಸುತ್ತೇನೆ ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ' ಎಂದು ಚಕ್ರವರ್ತಿ ಚಂದ್ರಚೂಡ್ ಮನವಿ ಮಾಡಿಕೊಂಡಿದ್ದಾರೆ.