

ಬೆಂಗಳೂರು: ‘ದಿಯಾ’ ಮತ್ತು ‘ಲವ್ ಮಾಕ್ಟೇಲ್’ ಎರಡೂ 2020ರಲ್ಲಿ ಸದ್ದಿಲ್ಲದೇ ಬಿಡುಗಡೆಯಾಗಿ ಸುದ್ದಿ ಮಾಡಿದ ಚಿತ್ರಗಳು. ಈಗ ‘ದಿಯಾ’ ನಾಯಕ ಪೃಥ್ವಿ ಅಂಬಾರ್, ‘ಲವ್ ಮಾಕ್ಟೇಲ್’ ನಾಯಕಿ ಮಿಲನಾ ನಾಗರಾಜ್ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ನವೀನ್ ದ್ವಾರಕಾನಾಥ್ ನಿರ್ದೇಶನದ ಈ ಚಿತ್ರದ ಟೀಸರ್ಅನ್ನು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನವೀನ್, ‘ಉಡುಪಿಯಲ್ಲಿ ಮೊದಲ ದಿನದ ಚಿತ್ರೀಕರಣ ಪ್ರಾರಂಭಿಸಬೇಕಿತ್ತು. ನನಗೆ, ಛಾಯಾಗ್ರಾಹಕ ಅಭಿಲಾಷ್ ಇಬ್ಬರಿಗೂ ಇದು ಮೊದಲ ಕಮರ್ಷಿಯಲ್ ಸಿನಿಮಾ. ಹೀರೋ, ಹೀರೋಯಿನ್ ಅನುಭವಿಗಳು, ಹೇಗಪ್ಪ ಕೆಲಸ ಮಾಡೋದು ಎಂಬ ಒತ್ತಡವಿತ್ತು. ಮೊದಲ ಸನ್ನಿವೇಶಕ್ಕೆ ಆಕ್ಷನ್ ಅಂತ ಹೇಳಿ, ನೋಡಿದರೆ ಕ್ಯಾಮರಾಮನ್ ತಲೆಸುತ್ತಿ ಬಿದ್ದುಹೋಗಿದ್ದರು. ಅವರಿಗೆ ಆರೈಕೆ ಮಾಡಿ, ನಂತರ ಚಿತ್ರೀಕರಣ ಪ್ರಾರಂಭಿಸಿದೆವು’ ಎಂದರು.
ನಾಯಕ ಪೃಥ್ವಿ ಮಾತನಾಡುತ್ತಾ, ‘ಚಿತ್ರದಲ್ಲಿ ನನ್ನ ಮತ್ತು ಮಿಲನಾ ನಡುವೆ ಮಾತು, ಜಗಳ ಎರಡೂ ಹೆಚ್ಚಿರುತ್ತದೆ. ವಾಹನ, ಜಾಗ ನಮ್ಮದಾಗಬೇಕು ಅಂದರೆ ಅದಕ್ಕೆ ರಿಜಿಸ್ಟ್ರೇಷನ್ ಮಾಡಿಸಬೇಕು. ಹಾಗೆಯೇ ಒಂದು ಸಂಬಂಧ ನಮ್ಮದಾಗಬೇಕು ಅಂದರೆ ಏನು ಮಾಡಬೇಕು ಎಂಬುದೇ ಚಿತ್ರದ ಕಥೆ’ ಎಂದು ಮಾಹಿತಿ ನೀಡಿದರು. ನಂತರ ಮಾತಿಗಿಳಿದ ನಾಯಕಿ ಮಿಲನಾ, ‘ನಾನು ಶೀರ್ಷಿಕೆ ಕೇಳಿಯೇ ಕುತೂಹಲದಿಂದ ಚಿತ್ರವನ್ನು ಒಪ್ಪಿಕೊಂಡೆ. ನಿರ್ದೇಶಕರು, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಹೇಗೆ ಪಾಠ ಮಾಡುತ್ತಾರೋ ಅದೇ ರೀತಿ ನನಗೆ ಕಥೆ ಹೇಳಿದರು. ಫೆಬ್ರವರಿ ನನಗೆ ಅದೃಷ್ಟದ ತಿಂಗಳು. ಚಿತ್ರ ಕೂಡ ಅದೇ ತಿಂಗಳು ಬಿಡುಗಡೆಯಾಗುತ್ತಿದೆ’ ಎಂದು ನಕ್ಕರು. ಚಿತ್ರಕ್ಕೆ ಹರೀಶ್ ಸಂಗೀತ, ಮನು ಶೆಡ್ಗಾರ್ ಸಂಕಲನವಿದ್ದು, ನಿಶ್ಚಲ್ ಫಿಲಂಸ್ ಬ್ಯಾನರ್ನಲ್ಲಿ ನವೀನ್ ರಾವ್ ನಿರ್ವಣದಲ್ಲಿ ಮೂಡಿಬಂದಿದೆ. ‘ಫಾರ್ ರಿಜಿಸ್ಟ್ರೇಷನ್’ 2023ರ ಫೆ. 10ರಂದು ಬಿಡುಗಡೆಗೆಯಾಗಲಿದೆ.