

ಬೆಂಗಳೂರು: ಪುನೀತ್ ರಾಜಕುಮಾರ್ ನಿಧನದ ಬಳಿಕ ಪಿಆರ್ಕೆ ಸಂಸ್ಥೆಯಿಂದ ಹೊಸ ಸಿನಿಮಾ ನಿರ್ವಣದ ವಿಚಾರ ಹೊರಬಿದ್ದಿರಲಿಲ್ಲ. ಅಭಿಮಾನಿ ವಲಯದಲ್ಲಿಯೂ ಆ ಕುತೂಹಲ ಇತ್ತಾದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಸದ್ದಿಲ್ಲದೆ ಪಿಆರ್ಕೆಯಿಂದ 10ನೇ ಚಿತ್ರ ನಿರ್ಮಾಣ ಮಾಡುವ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿಕೊಂಡಿದ್ದಾರೆ.
‘ಆಚಾರ್ ಆಂಡ್ ಕೋ’ ಎಂಬ ಹೊಸ ಚಿತ್ರದ ಶೀರ್ಷಿಕೆ ಪೋಸ್ಟರ್ ಸಹ ಅನಾವರಣ ಮಾಡಿದ್ದಾರೆ. ‘ಆಚಾರ್ ಆಂಡ್ ಕೋ’ ಹಲವು ವಿಶೇಷತೆಗಳನ್ನು ಒಳಗೊಂಡ ಸಿನಿಮಾ. ಅದೇನೆಂದರೆ, ಈ ಚಿತ್ರವನ್ನು ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನ ಮಾಡಿದರೆ, ಬಿಂದು ಮಾಲಿನಿ ಸಂಗೀತ ನಿರ್ದೇಶಕಿಯಾಗಿದ್ದಾರೆ. ಕ್ರಿಯೆಟಿವ್ ನಿರ್ಮಾಪಕಿಯಾಗಿ ಡಾನ್ನಿಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರ ಸುರೇಶ್ ತಂಡದಲ್ಲಿದ್ದಾರೆ. ಇವರಷ್ಟೇ ಅಲ್ಲದೆ, ಇನ್ನೂ ಹಲವು ಮಹಿಳೆಯರು ಈ ಚಿತ್ರದ ಭಾಗವಾಗಲಿದ್ದಾರಂತೆ.
ಹಾಗಾದರೆ ಏನಿದು ಸಿನಿಮಾ? ಸದ್ಯದ ಮಾಹಿತಿ ಪ್ರಕಾರ 60ರ ದಶಕದಲ್ಲಿನ ಬೆಂಗಳೂರಿನ ಹಿನ್ನೆಲೆಯಲ್ಲಿ ಇಡೀ ಚಿತ್ರ ಸಾಗಲಿದೆ. ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಪಿಆರ್ಕೆ ಜತೆಗೆ ಗುರುದತ್ ತಲ್ವಾರ್ ನಿರ್ವಣದಲ್ಲಿ ಕೈ ಜೋಡಿಸಿದ್ದಾರೆ.