

ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಪ್ರಿಯಾಂಕಾ ಚೋಪ್ರಾ ತಮ್ಮ ತಂದೆಯನ್ನು ಅದೆಷ್ಟು ಪ್ರೀತಿಸುತ್ತಿದ್ದರೋ, ಅವರ ತಂದೆ ಅದರ ದುಪ್ಪಟ್ಟು ಪ್ರೀತಿ ಮಾಡುತ್ತಿದ್ದರು. ಆದರೆ, ಒಂದು ಘಟನೆಯಿಂದ ಅವರಿಬ್ಬರ ಮಧ್ಯೆ ಬಿರುಕು ಮೂಡಿತು. ಇಬ್ಬರಲ್ಲೂ ಇದ್ದ ಇಗೋ ಅದನ್ನು ಇನ್ನಷ್ಟು ಹೆಚ್ಚಿಸಿತು. ಆಮೇಲೊಂದು ದಿನ ಅವೆಲ್ಲವೂ ಸರಿ ಹೋಯ್ತು ಬಿಡಿ. ಇಷ್ಟಕ್ಕೂ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾಗೂ ಮತ್ತು ಅವರ ತಂದೆಗೆ ಕ್ಲಾಶ್ ಆಗಿದ್ದು ಏಕೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ, ‘ನನ್ನ ಮತ್ತು ಅಪ್ಪನ ನಡುವೆ ತುಂಬಾ ಅನ್ಯೋನ್ಯತೆ ಇತ್ತು. ನಾನು 12ನೇ ವರ್ಷದವಳಾಗಿದ್ದಾಗಿ ಹೆಚ್ಚಿನ ಓದಿಗಾಗಿ ಅಮೇರಿಕಾಗೆ ಹೋಗಿದ್ದೆ. 16ನೇ ವಯಸ್ಸಿಗೆ ವಾಪಸ್ಸು ಬಂದೆ. ಅಷ್ಟರಲ್ಲಿ ಸಾಕಷ್ಟು ಬದಲಾಗಿದ್ದೆ. ಟೈಟ್ ಬಟ್ಟೆಗಳನ್ನು ತೊಡುತ್ತಿದ್ದೆ. ಅದನ್ನು ನೋಡಿ, ನಮ್ಮಪ್ಪ ಶೇಕ್ ಆಗಿದ್ದರು. ಕೆಲವು ವಾರ ಹೇಗೆ ಪ್ರತಿಕ್ರಯಿಸಬೇಕು ಎಂದು ಒದ್ದಾಡುತ್ತಿದ್ದರು. ಕ್ರಮೇಣ ಹುಡುಗರು ನನ್ನನ್ನು ಮನೆಗೆ ಾಲೋ ಮಾಡಿಕೊಂಡು ಬರೋರು. ಇದರಿಂದ ಇನ್ನಷ್ಟು ಸಮಸ್ಯೆಯಾಯಿತು. ನಮ್ಮಿಬ್ಬರಿಗೂ ಇಗೋ ಜಾಸ್ತಿ. ಇದರಿಂದ ನಮ್ಮಿಬ್ಬರಲ್ಲಿ ಸ್ವಲ್ಪ ದಿನ ಬಿರುಕಿತ್ತು’ ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕಾ.
‘ನಮ್ಮಿಬ್ಬರ ಮಧ್ಯೆ ಅದೆಷ್ಟೇ ಇಗೋ ಇದ್ದರೂ, ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದೆವು’ ಎಂದು ಹೇಳಿಕೊಂಡಿರುವ ಪ್ರಿಯಾಂಕಾ, ‘ಎಷ್ಟೇ ಜಗಳವಾದರೂ ಅಪ್ಪ ನನ್ನ ಹಿಂದೆ ಬಂಡೆಯಂತಿದ್ದರು. ಕೆಟ್ಟದ್ದು ಮಾಡುತ್ತೀಯೋ, ಒಳ್ಳೆಯದನ್ನ ಮಾಡುತ್ತೀಯೋ ಗೊತ್ತಿಲ್ಲ. ಒಟ್ಟಿನಲ್ಲಿ ಅದನ್ನು ಬಂದು ಹೇಳು. ತಪ್ಪಾಗಿದ್ದರೆ ಸರಿ ಮಾಡುವುದಕ್ಕೆ ನಾನು ಸಹಾಯ ಮಾಡುತ್ತೀನಿ. ಯಾವತ್ತೂ ನಿನ್ನ ಜತೆಗಿರುತ್ತೀನಿ ಎಂದು ಅಪ್ಪ ನನಗೆ ಹೇಳಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.