ಮನೆಯಲ್ಲೂ ಉಗ್ರಾವತಾರ? ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ..

pic priyanka
Published on

ಬೆಂಗಳೂರು: ಪ್ರಿಯಾಂಕಾ ಉಪೇಂದ್ರ, ‘ಉಗ್ರಾವತಾರ’ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ರಫ್ ಆಂಡ್ ಟಫ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲೇನೋ ಅವರು ‘ಉಗ್ರಾವತಾರ’ ತಾಳಿರಬಹುದು. ಆದರೆ, ನಿಜಜೀವನದಲ್ಲೂ ಅವರೆಷ್ಟು ಸೌಮ್ಯ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಪ್ರಿಯಾಂಕಾ ಮನೆಯಲ್ಲೂ ಉಗ್ರಾವತಾರ ತಾಳುತ್ತಾರೆ ಎಂದು ಸ್ವತಃ ಉಪೇಂದ್ರ ಹೇಳಿದ್ದಾರೆ.

ಶನಿವಾರ, ಪ್ರಿಯಾಂಕಾ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡಿದ್ದು ಉಪೇಂದ್ರ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನಾನು ಮನೆಯಲ್ಲಿ ಪ್ರಿಯಾಂಕಾ ಅವರ ಉಗ್ರಾವತಾರ ನೋಡಿದ್ದೇನೆ. ನಿಮಗೆ ಅದು ಹೊಸದೆನಿಸಬಹುದು. ಈ ಚಿತ್ರವು ಪ್ಯಾನ್ ಇಂಡಿಯಾದಲ್ಲಿ ತಯಾರಾಗಿದೆ ಎಂಬ ವಿಷಯ ಕೇಳಿ ಖುಷಿಯಾಯಿತು. ಚಿತ್ರದ ತುಣುಕುಗಳನ್ನು ನೋಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಚೆನ್ನಾಗಿ ಬಂದಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದರು.

ಪ್ರಿಯಾಂಕಾ ಅವರಿಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಟೀಸರ್ ಬಿಡುಗಡೆಯಾಗಿದ್ದು ಖುಷಿತಂದಿದೆಯಂತೆ. ‘ಆರಂಭದಲ್ಲಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಭಯವಿತ್ತು. ಬಹಳಷ್ಟು ಜನ, ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದರು. ಒಮ್ಮೆ ಪ್ರಯತ್ನ ಮಾಡೋಣ ಅಂತ ಹೊರಟಿದ್ದು, ಇಲ್ಲಿಯ ತನಕ ತಂದು ನಿಲ್ಲಿಸಿದೆ. ಫೈಟ್​ಗಳು ನೈಜವಾಗಿ ಬರಬೇಕೆಂದು ಎಲ್ಲೂ ಡ್ಯೂಪ್ ಬಳಸಿಲ್ಲ. ಸೂಕ್ತ ತರಬೇತಿ ಪಡೆದು ನಾನೇ ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಿದ್ದೇನೆ. ಚಿತ್ರದಲ್ಲಿ ಮಹಿಳೆಯರ ವಿರುದ್ಧದ ಶೋಷಣೆಗಳು, ಪೊಲೀಸರಿಂದ ಏನು ತೊಂದರೆ ಆಗುತ್ತಿದೆ ಎಂಬಂತಹ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಪ್ರಿಯಾಂಕಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net