ವಿಶ್ವರೂಪಿಣಿ ಹುಲಿಗೆಮ್ಮನಾದ ಪ್ರಿಯಾಂಕಾ; ದೇವಿ ಮಹಾತ್ಮೆ ಸಾರುವ ಚಿತ್ರಕ್ಕೆ ಸಾಯಿಪ್ರಕಾಶ್ ನಿರ್ದೇಶನ

Priyanka
Published on

ಕೊಪ್ಪಳ: ಹುಲಿಗಿ ಗ್ರಾಮದ ಹುಲಿಗೆಮ್ಮದೇವಿ ಸನ್ನಿಧಿಯಲ್ಲಿ ‘ವಿಶ್ವರೂಪಿಣಿ ಹುಲಿಗೆಮ್ಮ’ ಚಲನಚಿತ್ರಕ್ಕೆ ಮಂಗಳವಾರ ಮುಹೂರ್ತ ನೆರವೇರಿಸುವ ಮೂಲಕ ಚಿತ್ರೀಕರಣಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಓಂ ಸಾಯಿಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೊಸಪೇಟೆ ಬಿಜೆಪಿ ನಾಯಕಿ ಕವಿತಾ ಸಿಂಗ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

‘ವಿಶ್ವರೂಪಿಣಿ ಹುಲಿಗೆಮ್ಮ’ ಚಿತ್ರದ ಕುರಿತು ಮಾತನಾಡಿದ ಸಾಯಿಪ್ರಕಾಶ್, ‘ಕನ್ನಡದಲ್ಲಿ ಹಲವು ಚಿತ್ರ ನಿರ್ದೇಶಿಸಿರುವೆ. ಬಹುತೇಕ ಚಿತ್ರಗಳನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಶಕ್ತಿ ದೇವತೆ ಹುಲಿಗೆಮ್ಮ ದೇವಿಯ ಮಹಾತ್ಮೆ ಸಾರುವ ಭಕ್ತಿ ಪ್ರಧಾನ ಚಿತ್ರ. ಅನುಭವಿ ಕಲಾವಿದರ ತಂಡ ಚಿತ್ರದಲ್ಲಿದ್ದು, ಪ್ರೇಕ್ಷಕರು ಆಶೀರ್ವದಿಸುವ ಭರವಸೆ ಇದೆ’ ಎಂದರು.

ನಂತರ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ‘ನಾನು ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಭಕ್ತಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಹೀಗಾಗಿ ಪಾತ್ರದ ನಟನೆ ಸವಾಲು ಎನಿಸುತ್ತಿದೆ. ನನ್ನ ಈವರೆಗಿನ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲವಿದೆ. ತಾಯಿ ಹುಲಿಗೆಮ್ಮ ದೇವಿಯ ಆಶೀರ್ವಾದದಿಂದ ಚಿತ್ರ ಯಶಸ್ವಿಯಾಗುತ್ತದೆಂಬ ನಂಬಿಕೆ ಇದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net