ಮತ್ತೆ ಬಾಲಿವುಡ್‌ನತ್ತ ಪ್ರಿಯಾಂಕಾ : 12 ವರ್ಷಗಳ ಬಳಿಕ ಹಿಂದಿ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿದ ನಟಿ

priyanaka
Published on

ಬೆಂಗಳೂರು: ಕನ್ನಡ, ತೆಲುಗು, ತಮಿಳು, ಬಂಗಾಲಿ, ಒಡಿಯಾ ಜತೆ ನಟಿ ಪ್ರಿಯಾಂಕಾ ಉಪೇಂದ್ರ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. 1999ರಲ್ಲಿ ತೆರೆಕಂಡಿದ್ದ ‘ಸೌತೇಲಾ’ ಮೂಲಕ ಬಾಲಿವುಡ್ ಡೆಬ್ಯೂ ಮಾಡಿದ್ದ ಅವರು, ‘ಮುಝೆ ಮೇರಿ ಬೀವಿ ಸೇ ಬಚಾವೋ’, ‘ದುರ್ಗಾ’ ಚಿತ್ರಗಳಲ್ಲಿ ನಟಿಸಿದ್ದರು. 2013ರಲ್ಲಿ ರಿಲೀಸ್ ಆಗಿದ್ದ ‘ಎನಿಮಿ’ ಪ್ರಿಯಾಂಕಾ ಕಾಣಿಸಿಕೊಂಡಿದ್ದ ಕೊನೆಯ ಹಿಂದಿ ಸಿನಿಮಾ. ಇದೀಗ 12 ವರ್ಷಗಳ ಬಳಿಕ ಪ್ರಿಯಾಂಕಾ, ಹಿಂದಿ ಚಿತ್ರರಂಗದಲ್ಲಿ ಮತ್ತೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಹೆಸರು ‘ಸೆಪ್ಟೆಂಬರ್ 21’. ಆಲ್ಝೈಮರ್ ರೋಗಿ ಹಾಗೂ ಆತನ ಆರೈಕೆ ಮಾಡುವ ನರ್ಸ್ ಕಥೆ ಇದಾಗಿದ್ದು, ಇಲ್ಲಿ ಪ್ರಿಯಾಂಕಾ ಶುಶ್ರೂಷಕಿ ಕಮಲಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಿಯಾಂಕಾ ಜತೆ ಪ್ರವೀಣ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್ ಮತ್ತು ಅಮಿತ್ ಬೆಹ್ಲ್, ಸಚಿನ್ ಪಾಟೇಕರ್, ಆಯೇಷಾ ಐಮನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಕರ್ನಾಟಕ ಮೂಲದ 22 ವರ್ಷದ ಕರೆನ್ ಕ್ಷಿತಿ ಸುವರ್ಣ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿರುವುದು ವಿಶೇಷ. ಈ ಹಿಂದೆ ‘ಹೈಡ್ ಆ್ಯಂಡ್ ಸೀಕ್’ ಕಿರುಚಿತ್ರ ನಿರ್ದೇಶಿಸಿದ್ದ ಕ್ಷಿತಿಗೆ ಬೆಳ್ಳಿತೆರೆಯಲ್ಲಿ ಇದು ಮೊದಲ ಪ್ರಯತ್ನ. ಖಿನ್ನತೆಗೊಳಗಾದ 60 ವರ್ಷದ ವ್ಯಕ್ತಿ ರಾಜ್ ಆರೋಗ್ಯ ಹದೆಗೆಡುತ್ತಿರುವಾಗ, ಕಮಲಾ (ಪ್ರಿಯಾಂಕಾ) ಆರೈಕೆ ಮಾಡಲು ಮುಂದಾಗುತ್ತಾಳೆ. ಆ ಸಮಯದಲ್ಲಿ ಆತ ಎದುರಿಸುವ ಆರೋಗ್ಯ ಸಮಸ್ಯೆಗಳು ಹಾಗೂ ಶುಶ್ರೂಷಕಿ ಹೋರಾಟದ ಸುತ್ತ ಕಥೆ ಸಾಗುತ್ತದೆ. ಕನ್ನಡಿಗ ವಿನಯ್ ಚಂದ್ರ ಸಂಗೀತ, ಕೆ.ಅನಿಲ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಸದ್ಯ ಚಿತ್ರೀಕರಣ ಭರದಿಂದ ಸಾಗಿದ್ದು, ಅದು ಪೂರ್ಣಗೊಂಡ ಬಳಿಕ ಮೊದಲು ಅಂತಾರಾಷ್ಟ್ರೀಯ ಫಿಲಂ ೆಸ್ಟಿವಲ್‌ಗಳಲ್ಲಿ ಸ್ಪರ್ಧಿಸಲು ಚಿತ್ರತಂಡ ಯೋಜಿಸಿದೆ. ಆ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net