

'ಆರ್ಆರ್ಆರ್' ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸುತ್ತಾರೋ, ಇಲ್ಲವೋ ಎಂಬ ಸುದ್ದಿಯೊಂದು ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ನಿರ್ದೇಶಕ ರಾಜಮೌಳಿ ಮಾತ್ರ, ಆಲಿಯಾ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅದರ ನಡುವೆಯೂ, ಇತ್ತೀಚೆಗೆ ಚಿತ್ರದಿಂದ ಆಲಿಯಾ ಔಟ್ ಆಗಿದ್ದಾರೆ ಮತ್ತು ಆ ಜಾಗಕ್ಕೆ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಅದಕ್ಕೆ ಕಾರಣ, ಆಲಿಯಾ ಅಭಿನಯದ 'ಸಡಕ್ 2' ಚಿತ್ರಕ್ಕೆ ಪ್ರೇಕ್ಷಕರಿಂದ ಒಂದೇ ಸಮನೆ ಡಿಸ್ಲೈಕ್ಗಳು ಸಿಕ್ಕಿತ್ತು. ಆಲಿಯಾ ಇರುವುದರಿಂದ ಎಲ್ಲಿ ತಮ್ಮ ಚಿತ್ರಕ್ಕೂ ಅದೇ ಗತಿ ಬರುತ್ತದೋ ಎಂಬ ಕಾರಣಕ್ಕೆ ಆಲಿಯಾ ಅವರಿಗೆ ಗೇಟ್ ಪಾಸ್ ನೀಡಲಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು.
ಇದನ್ನೂ ಓದಿ: ಅಮ್ಮನ ಕನಸನ್ನು ಈಗ ನನಸು ಮಾಡ್ತಿದ್ದಾರಂತೆ ಸೋನು!
ಇನ್ನೊಂದು ಕಡೆ, ಆಲಿಯಾ 'ಬ್ರಹಾಸ್ತ್ರ', 'ತಖ್ತ್', 'ಗಂಗೂಬಾಯಿ ಕತಿಯಾವಾಡಿ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ, 'ಆರ್ಆರ್ಆರ್' ಚಿತ್ರಕ್ಕೆ ಡೇಟ್ಸ್ ಹೊಂದಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಂತೆ, ಅದೇ ಕಾರಣಕ್ಕೆ, ಬೇರೆ ನಾಯಕಿಯನ್ನು ನೋಡಿಕೊಳ್ಳಿ ಎಂದು ನಿರ್ದೇಶಕ ರಾಜಮೌಳಿ ಅವರಿಗೆ ಸಂದೇಶ ರವಾನಿಸಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು.
ಈ ಎಲ್ಲಾ ಕಾರಣಗಳಿಂದಾಗಿ ರಾಜಮೌಳಿ ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ, ಆಲಿಯಾಗೆ ಪರ್ಯಾಯವಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ನಾಯಕಿಯನ್ನಾಗಿ ಮಾಡುವ ಯೋಚನೆ ಅವರ ತಲೆಯಲ್ಲಿದೆ ಎಂಬ ವಿಷಯ ದೊಡ್ಡ ಸುದ್ದಿಯಾಗಿತ್ತು.
ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ, 'ಆರ್ಆರ್ಆರ್' ಚಿತ್ರದಲ್ಲಿ ಆಲಿಯಾ ನಟಿಸುವುದು ಪಕ್ಕಾ ಆಗಿದ್ದು, ಬೇರೆ ಯಾವ ನಟಿಯ ಹುಡುಕಾಟದಲ್ಲೂ ಚಿತ್ರತಂಡ ಇಲ್ಲವಂತೆ. ಅಷ್ಟೇ ಅಲ್ಲ, ಆಲಿಯಾ ತಮ್ಮ ಪಾತ್ರಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ತೊಡಗಿಸಿಕೊಂಡಿದ್ದಾರಂತೆ. ಇನ್ನೊಂದು ಕಡೆ ನಿರ್ದೇಶಕ ರಾಜಮೌಳಿ ಸಹ ಇದೆಲ್ಲಾ ಸುಳ್ಸುದ್ದಿ ಮತ್ತು ನಾಯಕಿಯಾಗಿ ಆಲಿಯಾ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರೆ ಎನ್ನಲಾಗಿದೆ.
'ಆರ್ಆರ್ಆರ್' ಚಿತ್ರದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ಚರಣ್ ತೇಜ ಜತೆಯಾಗಿ ನಟಿಸುತ್ತಿದ್ದು, ಅಜಯ್ ದೇವಗನ್ ಸಹ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯಕ್ಕೆ ನಿಂತಿದ್ದು, ವರ್ಷಾಂತ್ಯಕ್ಕೆ ಪುನಃ ಪ್ರಾರಂಭವಾಗುವ ಸಾಧ್ಯತೆಗಳಿವೆ.