ನನ್ನ ಮಕ್ಕಳು ಐಸಿಸ್​ಗೆ​ ಸೇರ್ತಾರೆ ಅಂತಾರೆ... ಈಗಲೂ ಅದು ಮುಂದುವರಿದಿದೆ ಎನ್ನುತ್ತಾ ಕಣ್ಣೀರಿಟ್ಟ ಪ್ರಿಯಾಮಣಿ! Priyamani

Priyamani
Published on

Priyamani : ನಾನು ಮುಸ್ತಾಫ ರಾಜ್​ ಅವರನ್ನು ಮದುವೆಯಾಗಿ ಸುಮಾರು ಏಳು ವರ್ಷಗಳೇ ಕಳೆದಿದ್ದರೂ ನಮ್ಮಿಬ್ಬರ ಧರ್ಮ ಬೇರೆ ಬೇರೆಯಾಗಿರುವುದರಿಂದ ಇಂದಿಗೂ ನಮ್ಮ ಮೇಲೆ ದ್ವೇಷ, ಅಸೂಯೆ ಮುಂದುವರೆದಿದೆ ಎಂದು ನಟಿ ಪ್ರಿಯಾಮಣಿ ಬೇಸರ ಹೊರಹಾಕಿದ್ದಾರೆ.

ಈವೆಂಟ್ ಮ್ಯಾನೇಜರ್ ಹಾಗೂ ಚಲನಚಿತ್ರ ನಿರ್ದೇಶಕ ಮುಸ್ತಾಫ ರಾಜ್ ಅವರನ್ನು 2017ರಲ್ಲಿ ಪ್ರಿಯಾಮಣಿ ವಿವಾಹವಾದರು. ಅಂದಿನಿಂದ ಇಂದಿನವರೆಗೂ ಪ್ರಿಯಾಮಣಿ ಮೇಲೆ ಕೆಲ ನೆಟ್ಟಿಗರು ಕೆಟ್ಟ ಕೆಟ್ಟ ಕಾಮೆಂಟ್​ಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಈ ಸಂಗತಿಯನ್ನು ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ಹೇಳಿಕೊಂಡಿದ್ದಾರೆ.

ನಾನು ನನ್ನ ನಿಶ್ಚಿತಾರ್ಥವನ್ನು ಮಾಡಿಕೊಂಡಾಗ ನನ್ನನ್ನು ಇಷ್ಟಪಡುವ ನನ್ನ ಅಭಿಮಾನಿಗಳ ಜತೆ ಸಂತೋಷದ ಕ್ಷಣವನ್ನು ಹಂಚಿಕೊಳ್ಳಲು ಬಯಸಿದ್ದೆ. ಅದರಂತೆ ನಿಶ್ಚಿತಾರ್ಥದ ಸುದ್ದಿಯನ್ನು ಹಂಚಿಕೊಂಡೆ. ಆದರೆ, ಅನಗತ್ಯ ದ್ವೇಷ ಹರಡಲು ಪ್ರಾರಂಭಿಸಿತು. ಲವ್ ಜಿಹಾದ್ ಆರೋಪಗಳು ಕೂಡ ಕೇಳಿಬಂದವು. ನಾಳೆ ನಮಗೆ ಮಕ್ಕಳಾದಾಗ, ಅವರು ಐಸಿಸ್ ಸೇರುತ್ತಾರೆಂದು ಹೇಳುವ ಹಂತಕ್ಕೂ ಕೆಲವರು ಹೋದರು ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಮಣಿ ಬೇಸರ ಹೊರಹಾಕಿದ್ದಾರೆ.

ನಾನು ಮಾಧ್ಯಮ ಮತ್ತು ಸಿನಿಮಾ ರಂಗಕ್ಕೆ ಸೇರಿದವಳಾಗಿರುವುದರಿಂದ, ನೀವು ಏನು ಬೇಕಾದರೂ ಹೇಳಬಹುದು ಎಂದು ನನಗೆ ಅರ್ಥವಾಗಿದೆ. ಆದರೆ, ಇದ್ಯಾವುದಕ್ಕೂ ಸಂಬಂಧಿಸಿದ ವ್ಯಕ್ತಿಯ ಮೇಲೆ ನೀವೇಕೆ ದಾಳಿ ಮಾಡಲು ಬಯಸುತ್ತೀರಿ? ಹೇಳಬೇಕೆಂದರೆ ಆ ವ್ಯಕ್ತಿ ಯಾರೆಂಬುದೇ ನಿಮಗೆ ತಿಳಿದಿಲ್ಲ. ಆದರೂ, ಅಂತಹ ಮೆಸೇಜ್​ಗಳನ್ನು ಮಾಡುತ್ತೀರಿ. ಆರಂಭದಲ್ಲಿ ನನಗೆ ಬಹಳಷ್ಟು ಮೆಸೇಜ್​ಗಳು ಬರುತ್ತಿದ್ದರಿಂದ 2 ರಿಂದ 3 ದಿನಗಳವರೆಗೆ ಅದು ನನ್ನ ಮೇಲೆ ಪರಿಣಾಮ ಬೀರಿತು. ಈಗಲೂ ಸಹ, ನಾನು ನನ್ನ ಪತಿಯೊಂದಿಗೆ ಏನನ್ನಾದರೂ ಪೋಸ್ಟ್ ಮಾಡಿದರೆ, ಹತ್ತರಲ್ಲಿ ಒಂಬತ್ತು ಕಾಮೆಂಟ್‌ಗಳು ನಮ್ಮ ಧರ್ಮ ಅಥವಾ ಜಾತಿಯ ಬಗ್ಗೆ ಇರುತ್ತವೆ ಎಂದು ಪ್ರಿಯಾಮಣಿ ಹೇಳಿದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಪ್ರಿಯಾಮಣಿ ಇತ್ತೀಚೆಗೆ 'ಆಫೀಸರ್ ಆನ್ ಡ್ಯೂಟಿ' ಚಿತ್ರದಲ್ಲಿ ಕುಂಚಕೋ ಬೋಬನ್ ಜೊತೆಗೆ ಕಾಣಿಸಿಕೊಂಡಿದ್ದರು. ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಚಿತ್ರದಲ್ಲೂ ನಟಿಸುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್'ನ ಮೂರನೇ ಸೀಸನ್​ನಲ್ಲಿ ಮನೋಜ್ ಬಾಜಪೇಯಿ ಜೊತೆ ನಟಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net