

ಬೆಂಗಳೂರು: ಮಾನ್ವಿತಾ ಕಾಮತ್, ಪೃಥ್ವಿ ಅಂಬರ್ ಅಭಿನಯದ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯೇ ಕೇಳಿ ಬಂದಿತ್ತು. ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಕಳೆದ ವಾರವೇ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ನ್ನು ರವಿಚಂದ್ರನ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೆ, ಚಿತ್ರಕ್ಕೆ ‘ಹ್ಯಾಪಿಲಿ ಮ್ಯಾರೀಡ್’ ಎಂಬ ಹೆಸರನ್ನು ಇಡಲಾಗಿದೆ.
‘ಹ್ಯಾಪಿಲಿ ಮ್ಯಾರೀಡ್’ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ವಪಕರಲ್ಲೊಬ್ಬರಾದ ಲೋಹಿತ್, ‘ಇವತ್ತಿನ ತಲೆಮಾರಿನವರು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ, ಒಂದಿಷ್ಟು ದಿನಗಳ ನಂತರ ದೂರಾಗುತ್ತಾರೆ. ಏಕೆಂದರೆ, ಮೆಚ್ಯುರಿಟಿ ಇರುವುದಿಲ್ಲ. ಒಂದು ಮಾಮೂಲಿ ಜಗಳ ತಾರಕಕ್ಕೆ ಹೋದಾಗ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎನ್ನುತ್ತಾರೆ. ಈ ಹಿಂದೆ, ‘ಮಮ್ಮಿ - ಸೇವ್ ಮೀ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್, ಆ ನಂತರ ಪೃಥ್ವಿ ಅಂಬರ್ ಅಭಿನಯದ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದ ಸಹನಿರ್ವಪಕರಾಗಿದ್ದರು.
ಈಗ ಅದೇ ತಂಡ ಈ ಚಿತ್ರದ ಹಿಂದಿದೆ. ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರ ನಿರ್ದೇಶಿಸಿದ್ದ ಅರುಣ್ಕುಮಾರ್ ಮತ್ತು ಸಬು ಅಲೋಷಿಯಲ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ. ಹಾಡುಗಳಿಗೆ ಅವಕಾಶ ಇಲ್ಲವಾದರೂ, ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ಇದೆಯಂತೆ. ಆ ಜವಾಬ್ದಾರಿಯನ್ನು ನೊಬಿನ್ ಪಾಲ್ಗೆ ನೀಡಲಾಗಿದೆ. ಇನ್ನು ಜಿತಿನ್ ದಾಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪೃಥ್ವಿ ಮತ್ತು ಮಾನ್ವಿತಾ ಅಲ್ಲದೆ ಧರ್ಮಣ್ಣ ಕಡೂರು ಮತ್ತು ಮಲೆಯಾಳಂನ ]ೕಜಿತ್ ರವಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಸುತ್ತಮುತ್ತ 12 ದಿವಸಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ.