

ಬೆಂಗಳೂರು: ಯೋಗರಾಜ್ ಭಟ್ ಜತೆಗೆ ನಿಂತು ಒಂದು ಫೋಟೋ ತೆಗೆಸಿಕೊಂಡರೆ ಜೀವನ ಧನ್ಯ ಎಂದಾಸೆ ಇತ್ತಂತೆ ಪೃಥ್ವಿ ಶ್ಯಾಮನೂರುಗೆ. ಬರೀ ಫೋಟೋ ತೆಗೆಸಿಕೊಳ್ಳುವುದಷ್ಟೇ ಅಲ್ಲ, ಭಟ್ ನಿರ್ಮಾಣದ ಹೊಸ ಚಿತ್ರದಲ್ಲಿ ಪೃಥ್ವಿಗೆ ನಟಿಸುವುದಕ್ಕೆ ಅವಕಾಶ ಸಿಕ್ಕಿದೆ. ಅದೇ 'ಪದವಿಪೂರ್ವ'.
ಕೆಲವು ತಿಂಗಳ ಹಿಂದೆ 'ಪದವಿಪೂರ್ವ' ಚಿತ್ರದ ಮುಹೂರ್ತವಾಗಿದ್ದಷ್ಟೇ ಅಲ್ಲ, ಈಗಾಗಲೇ ಮೂರು ಹಂತಗಳ ಚಿತ್ರೀಕರಣ ಸಹ ಮುಗಿದಿದೆ. ಈ ಚಿತ್ರದ ಬಗ್ಗೆ ಸಕತ್ ಎಕ್ಸೈಟ್ ಆಗಿರುವ ಪೃಥ್ವಿಗೆ ನಟನಾಗಬೇಕೆಂಬ ಆಸೆ ಬಾಲ್ಯದಿಂದಲೂ ಇತ್ತಂತೆ.
'ನಾನು ಎರಡನೇ ಕ್ಲಾಸಿನಲ್ಲಿರುವಾಗಿನಿಂದ ನಟನಾಗಬೇಕು ಎಂಬ ಆಸೆ ಇತ್ತು. ಬಾಲನಟನಾಗಿ ಗುರುತಿಸಿಕೊಳ್ಳಬೇಕು ಎಂದು ಒಂದಿಷ್ಟು ಚಿತ್ರಗಳಲ್ಲಿ ಆಡಿಷನ್ ಸಹ ಕೊಟ್ಟೆ. ಆದರೆ, ಚಿಕ್ಕಂದಿನಿಂದಲೂ ನಾನು ಬಹಳ ಉದ್ದ ಇದ್ದೆ. ಪಾತ್ರಕ್ಕೆ ಉದ್ದ ಎಂಬ ಕಾರಣಕ್ಕೆ ನನಗೆ ಬಾಲನಟನಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಕೊನೆಗೆ ಪಿಯುಸಿಗೆ ಬಂದ ಮೇಲೆ ಮಾಡಲಿಂಗ್ ಮಾಡಿದೆ. ಯೋಗರಾಜ್ ಭಟ್ ಅವರು ತಮ್ಮ ಹೊಸ ಚಿತ್ರಕ್ಕೆ ಹೀರೋ ಹುಡುಕುತ್ತಿದ್ದಾರೆ ಎಂದು ಗೊತ್ತಾಯಿತು. ಆಡಿಷನ್ನಲ್ಲಿ ಭಾಗವಹಿಸಿದೆ. ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು' ಎನ್ನುತ್ತಾರೆ ಪೃಥ್ವಿ.
ಚಿತ್ರದಲ್ಲಿ ನಟಿಸುವುದಕ್ಕಿಂತ ಮುನ್ನ ಪೃಥ್ವಿ ಸ್ವಲ್ಪ ನರ್ವಸ್ ಆಗಿದ್ದರಂತೆ. ವರ್ಕ್ಶಾಪ್ನಲ್ಲಿ ಭಾಗವಹಿಸಿದ ನಂತರ ಸುಲಭವಾಯಿತಂತೆ. 'ನಿಜ ಹೇಳಬೇಕೆಂದರೆ, ಕ್ಯಾಮೆರಾ ಫೇಸ್ ಮಾಡಿದಾಗ ಏನೂ ಅನಿಸಲಿಲ್ಲ. ಯೋಗರಾಜ್ ಭಟ್ ಅವರು ಸಾಕಷ್ಟು ಇನ್ಪುಟ್ಸ್ ಕೊಟ್ಟಿದ್ದರು. ಇನ್ನು, ನಮ್ಮ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನಿರ್ದೇಶಕರಾದ ಹರಿಪ್ರಸಾದ್ ಸಾಕಷ್ಟು ತಿದ್ದಿದರು. ಅವರೆಲ್ಲರ ಸಹಾಯದಿಂದ ಚೆನ್ನಾಗಿ ನಟಿಸುವ ಪ್ರಯತ್ನ ಮಾಡಿದ್ದೇನೆ' ಎನ್ನುತ್ತಾರೆ ಪೃಥ್ವಿ.
ಇದನ್ನೂ ಓದಿ: ವ್ಯಸನಗಳ ವಿರುದ್ಧ ಪ್ರಿಯಾಂಕಾ ಉಗ್ರಾವತಾರ
'ಪದವಿಪೂರ್ವ' ನಂತರ ಮುಂದೇನು? ಎಂದರೆ, ಸದ್ಯಕ್ಕೆ ಕಾದು ನೋಡುವುದಾಗಿ ಹೇಳುತ್ತಾರೆ ಪೃಥ್ವಿ. 'ಚಿತ್ರ ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಚಿತ್ರ ಮುಗಿಸಿ ಭವಿಷ್ಯದ ಬಗ್ಗೆ ಯೋಚಿಸುತ್ತೇನೆ. ಹೀರೋ ಆಗಿ ನಟಿಸಬೇಕೆಂಬ ಆಸೆ ಈ ಚಿತ್ರದ ಮೂಲಕ ಈಡೇರಿದೆ' ಎಂದು ಖುಷಿಯಾಗುತ್ತಾರೆ ಪೃಥ್ವಿ.
ಈ ಚಿತ್ರದಲ್ಲಿ ಪೃಥ್ವಿಗೆ ನಾಯಕಿಯರಾಗಿ ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಟಿಸಿದ್ದು, 'ರಾಮಾ ರಾಮಾ ರೇ' ಖ್ಯಾತಿಯ ಅನೀಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.