

ಕೋಲಾರ: ಬಿಗ್ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಮದುವೆ ವಿವಾದ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತಿಲ್ಲ.
ಮಾ.27ರ ಬೆಳಗ್ಗೆ ಪ್ರಿಯಕರ ನಾಗಾರ್ಜುನ್ ಜತೆ ಚೈತ್ರಾ ಕೊಟ್ಟೂರು ಮದುವೆಯಾಗಿದ್ದರು. ಅಂದು ಸಂಜೆಯೇ ಪತ್ನಿ ವಿರುದ್ಧ ಪತಿ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ನವಜೋಡಿ ಮದುವೆ ವಿವಾದ ಸ್ಫೋಟಗೊಂಡಿದೆ. ಮದುವೆ ಬಗ್ಗೆ ತಗಾದೆ ತೆಗೆದ ನಾಗಾರ್ಜುನ್ ಪೋಷಕರು ಮತ್ತು ಚೈತ್ರಾ ಕೊಟ್ಟೂರು ಪೋಷಕರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎರಡೂ ಕಡೆಯವರ ವಾದ ಆಲಿಸಿದ ಪೋಲೀಸರು ಇಬ್ಬರನ್ನೂ ಎರಡು ದಿನಗಳ ನಂತರ ಅಂದರೆ ನಾಳೆ(ಬುಧವಾರ) ಠಾಣೆಗೆ ಬರಲು ಹೇಳಿ ಕಳುಹಿಸಿದ್ದಾರೆ.
ತನ್ನ ಹುಟ್ಟುಹಬ್ಬದಲ್ಲಿ ಕೇಕ್ ಕತ್ತರಿಸಿದ ವಿಡಿಯೋ ಮತ್ತು ನಾಗಾರ್ಜುನ್ ಕೈಗೆ ಚೈತ್ರಾ ಪ್ರೀತಿಯಿಂದ ಬ್ರೇಸ್ಲೆಟ್ ಹಾಕುತ್ತಿರುವ ದೃಶ್ಯದ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಇಬ್ಬರ ಪೋಷಕರ ನಡುವೆ ಮಾತುಕತೆ ಮುಂದುವರಿದಿದ್ದು, ಯಾವ ರೀತಿಯ ಅಂತ್ಯ ಕಾಣಲಿದೆ ಎಂಬುದು ಪೊಲೀಸರ ಸಮ್ಮುಖದಲ್ಲಿ ಮಾ.31ರಂದು ಗೊತ್ತಾಗಲಿದೆ.