

ಬೆಂಗಳೂರು: ಥಿಯೇಟರ್‌ಗಳನ್ನು ತುಂಬಿಸುವುದೇ ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಸವಾಲಾಗಿದೆ. 2025ರ ಮೊದಲ ಐದು ತಿಂಗಳಲ್ಲಿ ಕನ್ನಡದ 110 ಚಿತ್ರಗಳು ಬಿಡುಗಡೆಯಾದರೂ, ಇದರಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆದಿರುವ ಸಿನಿಮಾಗಳು ಬೆರಳಣಿಕೆಯಷ್ಟು ಮಾತ್ರ. ವರ್ಷದ ಮೊದಲ ಎರಡು-ಮೂರು ತಿಂಗಳಲ್ಲಿ ವಾರಕ್ಕೆ ಏಳರಿಂದ 12 ಸಿನಿಮಾಗಳು ರಿಲೀಸ್ ಆಗಿದ್ದು, ಇದೆ. ಇದರಲ್ಲಿ ಯಾವ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಕಳೆದ ವರ್ಷ ಅನುಭವಿಸಿದಂತೆ ಈ ವರ್ಷ ಕೂಡ ಥಿಯೇಟರ್‌ಗಳು ನಷ್ಟ ಅನುಭವಿಸುತ್ತಿವೆ. ಈ ಮಧ್ಯೆಯೇ, ಈ ವರ್ಷದ ಮೊದಲರ್ಧದಲ್ಲಿ ಯಾವುದೇ ಸ್ಟಾರ್ ನಟರ ಸಿನಿಮಾಗಳು ಕೂಡ ಬಿಡುಗಡೆಯಾಗಿಲ್ಲ. ಇದು ಮತ್ತೊಂದು ರೀತಿಯ ಬರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಮೊದಲ ಸಾಲಿನ ಹೀರೋಗಳ ವರ್ಷಕ್ಕೆ ಎರಡು-ಮೂರು ಸಿನಿಮಾಗಳು ರಿಲೀಸ್ ಮಾಡಬೇಕು ಎಂಬುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿಬಂದ ಒತ್ತಾಯ. ಆಗ ಮಾತ್ರ ಹೆಚ್ಚು ಥಿಯೇಟರ್‌ಗಳು ತುಂಬುತ್ತವೆ ಹಾಗೂ ಕನ್ನಡ ಚಿತ್ರರಂಗಕ್ಕೆ ವೇಗ ಸಿಗುವ ಜತೆಗೆ ಎರಡನೇ ವರ್ಗದ ಕಲಾವಿದರಿಗೆ ಅನುಕೂಲವಾಗಲಿದೆ ಎಂಬುದು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರದರ್ಶಕ ವಲಯದ ಅಭಿಪ್ರಾಯವಾಗಿದೆ.
ಕಳೆದ ಐದು ತಿಂಗಳಲ್ಲಿ ಪ್ರಮುಖ ನಟರ ಸಿನಿಮಾಗಳು ರಿಲೀಸ್ ಆಗಿಲ್ಲ. ಆದರೆ, ಮುಂದಿನ ಆರು ತಿಂಗಳಲ್ಲಿ ಹಲವಾರು ಚಿತ್ರಗಳು ರಿಲೀಸ್‌ಗೆ ಸಿದ್ಧತೆ ನಡೆಸುತ್ತಿವೆ. ಇದು ಆಶಾವಾದವಾಗಿ ಪರಿಣಮಿಸಿದೆ. ಈಗಾಗಲೇ ಘೋಷಿಸಿಕೊಂಡಿರುವಂತೆ ಶಿವಣ್ಣ, ಉಪೇಂದ್ರ, ರಾಜ್ ಬಿ.ಶೆಟ್ಟಿ ಅಭಿನಯದ ‘45’ ಚಿತ್ರವು ಇದೇ ಅ.14ಕ್ಕೆ ಬಿಡುಗಡೆಯಾಗಲಿದೆ. ಬಳಿಕ ಧ್ರುವ ಸರ್ಜಾ ಅಭಿನಯದ ‘ಕೆಡಿ: ದ ಡೆವಿಲ್’, ಗಣೇಶ್ ನಟನೆಯ ‘ಪಿನಾಕ’, ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಜತೆಗೆ ಹಲವು ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ಈ ಚಿತ್ರಗಳ ಮೇಲೆಯೇ ಚಿತ್ರಮಂದಿರಗಳ ಚಿತ್ತ ನೆಟ್ಟಿದೆ.
ಈ ವರ್ಷದ ಐದು ತಿಂಗಳಲ್ಲಿ ಸ್ಟಾರ್ ನಟರ ಸಿನಿಮಾಗಳು ಬಂದಿದ್ದರೆ, ಥಿಯೇಟರ್‌ಗಳಿಗೆ ಅನುಕೂಲವಾಗುತ್ತಿತ್ತು ಎಂದು ಮಾತು ಆರಂಭಿಸಿದ ಫಿಲಂ ಛೇಂಬರ್ ಅಧ್ಯಕ್ಷ ಎಂ.ನರಸಿಂಹಲು, ‘ಈಗ ಚಿತ್ರಮಂದಿರಗಳು ನಷ್ಟದಲ್ಲಿದ್ದು, ಬೇರೆ ವ್ಯಾಪಾರದಿಂದ ಬಂಡವಾಳ ತಂದು ಇಲ್ಲಿ ಹಾಕುತ್ತಿದ್ದೇವೆ. ದಿನೇ ದಿನೇ ನಷ್ಟವಾದರೆ ಚಿತ್ರಮಂದಿರ ನಡೆಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಥಿಯೇಟರ್ ಸಮಸ್ಯೆ ಹಾಗೂ ಕನ್ನಡ ಚಿತ್ತರಂಗದ ವಿವಿಧ ವಿಚಾರಗಳ ಕುರಿತಂತೆ ನಟ ಶಿವರಾಜಕುಮಾರ್ ನಿವಾಸದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅದಕ್ಕೆ ಸಕಾರತ್ಮಕವಾಗಿ ಶಿವಣ್ಣ ಪ್ರತಿಸ್ಪಂದಿಸಿದ್ದು, ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಥಿಯೇಟರ್ ತುಂಬ ಬೇಕಾದರೆ, ವರ್ಷಕ್ಕೆ ಪ್ರಮುಖ ನಟರ ಎರಡು-ಮೂರು ಸಿನಿಮಾಗಳು ಬರಲೇಬೇಕು ಎಂಬುದನ್ನು ಅವರಿಗೆ ಮನದಟ್ಟ ಮಾಡಿದ್ದೇವೆ’ ಎಂದು ಅಭಿಪ್ರಾಯಪಡುತ್ತಾರೆ.
ಥಿಯೇಟರ್‌ಗಳ ಜತೆಗೆ ನಿರ್ಮಾಪಕರು ಕೂಡ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರರಂಗದ ಬೆಳವಣಿಗೆಗೆ ಪ್ಯಾನ್ ಇಂಡಿಯಾದಿಂದ ಹೊರಬಂದು ಫ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂಬುದಕ್ಕೆ ನಿರ್ಮಾಪಕ ಡಿ.ಕೆ.ರಾಮಕೃಷ್ಣ, ‘ಕನ್ನಡದ ಪ್ರಮುಖ ನಟರು ಸಿನಿಮಾಗಳು ಮಾಡುವುದು ಥಿಯೇಟರ್ ಪ್ರರ್ದಶನಕ್ಕಾಗಿಯೇ ಹೊರತು ಒಟಿಟಿ ಅಥವಾ ಟಿವಿಗಾಗಿಯೇ ಅಲ್ಲ. ಅವರು ವರ್ಷಕ್ಕೆ ಎರಡು-ಮೂರು ಸಿನಿಮಾಗಳು ಮಾಡಿದಾಗಲೇ ಹೆಚ್ಚು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರುತ್ತಾರೆ. ಆಗ ಚಿತ್ರರಂಗ ಗಟ್ಟಿಯಾಗುತ್ತದೆ ಜತೆಗೆ ಚಿತ್ರಮಂದಿರಗಳು ಉಳಿಯುತ್ತವೆ. ಸಣ್ಣ ಕಲಾವಿದರ ಸಿನಿಮಾಗಳಿಗೂ ಪ್ರೋತ್ಸಾಹ ಸಿಗುತ್ತದೆ. ಕನ್ನಡ ಸಿನಿಮಾಗಳಿಗೆ ಕಾರ್ಮಿಕರು, ಜನ ಸಾಮಾನ್ಯರು, ಕುಟುಂಬ ಹಾಗೂ ಯುವ ಜನರೇ ಹೆಚ್ಚು ಪ್ರೇಕ್ಷಕರು. ಅವರನ್ನು ಕರೆ ತರುವ ನಿಟ್ಟಿನಲ್ಲಿ ಏಕರೂಪ ಟಿಕೆಟ್ ದರ ನಿಗದಿಪಡಿಸಬೇಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಎಂದು ಎರಡ್ಮೂರು ವರ್ಷ ಕಾಲ ಕಳೆಯುವುದಕ್ಕಿಂತ ವರ್ಷಕ್ಕೆ ಎರಡು-ಮೂರು ಒಳ್ಳೆಯ, ಸದಭಿರುಚಿ ಸಿನಿಮಾ ನೀಡಿದಾಗಲೇ ನಿರ್ಮಾಪಕರಿಗೆ, ಚಿತ್ರಮಂದಿರಗಳಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ.
15-20 ದಿನಗಳ ಕಾಲ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಾಗಲೇ ಆ ಚಿತ್ರಕ್ಕೆ ಮುಂದೆ ಒಳ್ಳೆಯ ವ್ಯಾಪಾರವಾಗುತ್ತದೆ. ಸದ್ಯ ಈ ಪರಿಸ್ಥಿತಿ ಇಲ್ಲ. ಕನ್ನಡದ ಪ್ರಮುಖ ನಟರ ಸಿನಿಮಾಗಳು ಹೆಚ್ಚು ಬಂದರೆ ಸಿಂಗಲ್ ಥಿಯೇಟರ್‌ಗಳು ಉಳಿದುಕೊಳ್ಳುತ್ತವೆ. ಇದು ಮುಂದೆ ಬರುವ ಹೊಸಬರ ಸಿನಿಮಾಗಳಿಗೆ ಅನುಕೂಲವಾಗುತ್ತದೆ. ಹೊಸಬರ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ದಿನ ಪ್ರದರ್ಶನಕ್ಕೆ ಅವಕಾಶ ಸಿಗಲ್ಲ. ಸಿಂಗಲ್ ಥಿಯೇಟರ್‌ಗಳೇ ಮುಖ್ಯವಾಗುತ್ತವೆ. | ರೋಹಿತ್ ಕೀರ್ತಿ, ನಿರ್ದೇಶಕ