

ಬೆಂಗಳೂರು: ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’ ಚಿತ್ರದ ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಚಿತ್ರವು ನಾಡಿದ್ದು ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಚಿತ್ರತಂಡವು ಬಿಡುಗಡೆಯನ್ನು ಎರಡು ವಾರಗಳ ಕಾಲ ಮುಂದಕ್ಕೆ ಹಾಕಿದ್ದು, ಈಗ ನ. 12ಕ್ಕೆ ಚಿತ್ರ ತೆರೆಕಾಣಲಿದೆ. ಗಣೇಶ್ ಅಭಿನಯದ ‘ಸಖತ್’ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಅದೇ ದಿನ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇದೆ. ಒಂದು ಪಕ್ಷ ‘ಸಖತ್’ ತಂಡದವರು ಸಹ ಅದೇ ದಿನ ಬಂದರೆ, ಗಣೇಶ್ ಮತ್ತು ಪ್ರೇಮ್ ಅಭಿನಯದ ಚಿತ್ರಗಳು ಒಂದೇ ದಿನ ಬಿಡುಗಡೆಯಾದಂತಾಗುತ್ತದೆ.
‘ಪ್ರೇಮಂ ಪೂಜ್ಯಂ’ ಮುಂದಕ್ಕೆ ಹೋಗಿದ್ದು ಯಾಕೆ? ಅದಕ್ಕೆ ಹೀಗೆ ಕಾರಣ ನೀಡುತ್ತಾರೆ ಪ್ರೇಮ್ ‘ಈಗಾಗಲೇ ಬಿಡುಗಡೆಯಾಗಿರುವ ‘ಕೋಟಿಗೊಬ್ಬ 3’ ಮತ್ತು ‘ಸಲಗ’ ಚಿತ್ರಗಳು ಒಳ್ಳೆಯ ಪ್ರದರ್ಶನ ಕಾಣುತ್ತಿವೆ. ನಾಡಿದ್ದು ‘ಭಜರಂಗಿ 2’ ಬರಲಿದೆ. ಆ ಚಿತ್ರಕ್ಕೂ ಸಾಕಷ್ಟು ಚಿತ್ರಮಂದಿರಗಳು ಸಿಗುವುದರಿಂದ, ನಮಗೆ ಚಿತ್ರಮಂದಿರಗಳ ಅಭಾವ ಎದುರಾಗುತ್ತದೆ. ರಾಜ್ಯಾದ್ಯಂತ 350 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಆಸೆ. ಆದರೆ, ಮೂರು ದೊಡ್ಡ ಚಿತ್ರಗಳಿಂದ, ನಮಗೆ ಅಷ್ಟೊಂದು ಚಿತ್ರಮಂದಿರಗಳು ಸಿಗುವುದಿಲ್ಲ. ಮೇಲಾಗಿ ಅಭಿಮಾನಿಗಳು ಮತ್ತು ಚಿತ್ರರಂಗದವರು ಬಿಡುಗಡೆ ಮುಂದಕ್ಕೆ ಹಾಕಿ, ಕ್ಲಾಶ್ ಬೇಡ ಎನ್ನುತ್ತಿದ್ದಾರೆ. ಹಾಗಾಗಿ, ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದೇವೆ’ ಎನ್ನುತ್ತಾರೆ.