

‘ಇನ್ನೇನು ಸಿನಿಮಾ ಮಾಡುವುದೇ ಬೇಡ. 24ನೇ ಚಿತ್ರಕ್ಕೇ ನನ್ನ ಚಿತ್ರ ಜೀವನ ಕೊನೆಯಾಗಲಿ ಎಂದುಕೊಂಡಿದ್ದೆ. ಆದರೆ, ಡಾ. ರಾಘವೇಂದ್ರ ಅವರು ತಂದ ‘ಪ್ರೇಮಂ ಪೂಜ್ಯಂ’ ಸಿನಿಮಾದ ಕಥೆ ನನ್ನನ್ನು 25ನೇ ಸಿನಿಮಾ ಮಾಡಿಸುವಂತೆ ಪ್ರೇರೆಪಿಸಿತು’ ಹೀಗೆ ಹೇಳಿಕೊಳ್ಳುತ್ತಾರೆ ಪ್ರೇಮ್.
ಪ್ರೇಮ್ ಅಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ? ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಒಂದೇ ತರಹದ ಕಥೆಗಳು ಬರುತ್ತಿದ್ದವು. ಯಾರೋ ಹೊಸ ನಿರ್ಮಾಪಕರು ಬರುತ್ತಾರೆ. ಚಿತ್ರರಂಗದಲ್ಲಿ ಏನೋ ಮಾಡಬೇಕು ಎಂದು ಅವರು ಸಾಕಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಇಲ್ಲಿ ಕಥೆ ಸರಿ ಇರುವುದಿಲ್ಲ. ಯಾವುದೂ ಹೊಂದಾಣಿಕೆ ಆಗುವುದಿಲ್ಲ. ಕಥೆ ಹೇಳುವಾಗಲೇ ಅದೇನಾಗುತ್ತದೆ ಎಂದು ಗೊತ್ತಾಗಿಬಿಡುತ್ತದೆ. ಸುಮ್ಮನೆ ನಿರ್ವಪಕರಿಗೋಸ್ಕರ ಮಾಡಬೇಕಾಗುತ್ತದಷ್ಟೇ. ಒಂದೆರೆಡು ಸಿನಿಮಾ ದುಡ್ಡಿಗಾಗಿ ಮಾಡಿದರೂ, ಮೂರನೆಯ ಸಿನಿಮಾ ಮತ್ತೆ ಅದೇ ತರಹ ಆಗುತ್ತದೆ. ಹಾಗಾಗಿ, ಒಳ್ಳೆಯ ಸಿನಿಮಾ ಮಾಡಬೇಕು, ಇಲ್ಲವಾದರೆ ಬೇಡ ಎಂದು ತೀರ್ವನಿಸಿದ್ದೆ’ ಎನ್ನುತ್ತಾರೆ ಪ್ರೇಮ್.
ಅದಕ್ಕೂ ಮುನ್ನ 84 ಕಥೆಗಳನ್ನು ಕೇಳಿ ನಿರಾಕರಿಸಿದ್ದರಂತೆ ಪ್ರೇಮ್ 84 ಕಥೆಗಳಲ್ಲಿಲ್ಲದ ಸ್ವಾರಸ್ಯ 85ನೇ ಕಥೆಯಲ್ಲೇನಿತ್ತು ಎಂದರೆ, ಪಾತ್ರ ಎಂಬ ಉತ್ತರ ಅವರಿಂದ ಬರುತ್ತದೆ. ‘ಇದೊಂದು ಫಿಲಾಸಫಿಕಲ್ ಪಾತ್ರ. ಶ್ರೀರಾಮಚಂದ್ರನ ತರಹದ ಪಾತ್ರವದು. 24 ಕ್ಯಾರಟ್ ಗೋಲ್ಡ್ ಅಂತಾರಲ್ಲ, ಹಾಗಿದೆ. ಈ ತರಹ ಒಬ್ಬ ವ್ಯಕ್ತಿಯೂ ಇರುತ್ತಾನಾ? ಈ ತರಹದ್ದೊಂದು ಪ್ರೀತಿಯೂ ಇರುತ್ತದಾ? ಎಂದು ಆಶ್ಚರ್ಯವಾಯಿತು. ಹಾಗಾಗಿ ಒಪ್ಪಿದೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ಪ್ರೇಮ್ ಪಾತ್ರಕ್ಕೆ ಏಳು ಶೇಡ್ಗಳಿವೆ. 20 ವರ್ಷಗಳ ಕಾಲಘಟ್ಟದಲ್ಲಿ ಕಥೆ ನಡೆಯಲಿದ್ದು, ನಾಯಕಿಯರಾಗಿ ಐಂದ್ರಿತಾ ರೇ ಮತ್ತು ಬೃಂದಾ ಆಚಾರ್ಯ ನಟಿಸಿದ್ದಾರೆ.