

ಕರೊನಾ ಕಾಟದಿಂದ ದೇಶವೇ ಲಾಕೌಟ್ ಆಗಿ, ಚಿತ್ರೀಕರಣ ಚಟುವಟಿಕೆಗಳೆಲ್ಲಾ ಬಂದ್ ಆದಾಗ, ಬೆಂಗಳೂರು ಬಿಟ್ಟು ಹಳ್ಳಿ ಸೇರಿದವರಲ್ಲಿ ಪ್ರಥಮ್ ಸಹ ಒಬ್ಬರು. ಊರಿನಲ್ಲಿ ಒಂದಿಷ್ಟು ದಿನ ಸೆಟ್ಲ ಆಗಿದ್ದ ಪ್ರಥಮ್, ಇದೀಗ ತುಮಕೂರಿನಲ್ಲಿ ತರಕಾರಿ ಮಾರುತ್ತಿದ್ದಾರೆ.
ಕೇಳಿ ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಊರಿನಲ್ಲಿ ದನ-ಕರು ಮೇಯಿಸಿಕೊಂಡಿದ್ದ ಪ್ರಥಮ್, ಇದೀಗ ತಮ್ಮ ‘ನಟಭಯಂಕರ’ ಚಿತ್ರದ ನಿರ್ಮಾಪಕ ನೀಲೇಶ್ ಅವರ ಜತೆಗೆ ಸೇರಿ ಅಗತ್ಯವಿರವವರಿಗೆ ದಿನಸಿ ಮತ್ತು ತರಕಾರಿ ಮಾರುತ್ತಿದ್ದಾರೆ. ತೀರಾ ಬಡವರಾದರೆ ಅವರಿಗೆ ಉಚಿತವಾಗಿ ಹಂಚುತ್ತಿರುವ ಪ್ರಥಮ್ ಮತ್ತು ನೀಲೇಶ್, ಇತರರಿಗೆ ನ್ಯಾಯಯುತವಾದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರಂತೆ. ಒಟ್ಟು 13 ವಾಹನಗಳಲ್ಲಿ ತುಮಕೂರಿನಾದ್ಯಂತ ತರಕಾರಿ ಮತ್ತು ಅಗತ್ಯ ದಿನಸಿ ಮಾರಾಟ ಮಾಡಲಾಗುತ್ತಿದ್ದು, ಈ ಕಾರ್ಯದಲ್ಲಿ ಪ್ರಥಮ್ ಸಹ ಭಾಗಿಯಾಗಿರುವುದು ವಿಶೇಷ.
ಇನ್ನು ಪ್ರಥಮ್ ಅವರಿಗೆ ಜಿಲ್ಲಾಡಳಿತದಿಂದ, ‘ಅಗತ್ಯ ಸೇವೆಯಲ್ಲಿ ನಿರತರು’ ಎಂಬ ಗುರುತಿನ ಚೀಟಿ ಸಹ ಸಕ್ಕಿದ್ದು, ಇದರಿಂದ ತರಕಾರಿ ಹಂಚುವ ಕೆಲಸಕ್ಕೆ ಸಹಾಯವಾಗಿದೆ.