ಪ್ರಮೋದ್ ಹುಟ್ಟುಹಬ್ಬಕ್ಕೆ 'ಅಲಂಕಾರ್​ ವಿದ್ಯಾರ್ಥಿ' ಚಿತ್ರದ ಫಸ್ಟ್​ಲುಕ್​

Pramod - Final
Published on

ಬೆಂಗಳೂರು: 'ಪ್ರೀಮಿಯರ್​ ಪದ್ಮಿನಿ' ಚಿತ್ರದ ನಂತರ ಪ್ರಮೋದ್​ಗೆ ಕನ್ನಡ ಚಿತ್ರರಂಗದಲ್ಲಿ ಕ್ರಮೇಣ ಬೇಡಿಕೆ ಹೆಚ್ಚುತ್ತಿದೆ. ಲಾಕ್​ಡೌನ್​ ಮುಗಿದ ನಂತರ, 'ರತ್ನನ್​ ಪ್ರಪಂಚ', 'ಇಂಗ್ಲೀಷ್​ ಮಂಜ' ಮತ್ತು 'ಹಂಡ್ರೆಡ್​ ಮಂಕೀಸ್​' ಎಂಬ ಚಿತ್ರಗಳಲ್ಲಿ ಅವರು ನಟಿಸುತ್ತಿರುವ ಸುದ್ದಿ ಇತ್ತು. ಇದೀಗ ಆ ಪಟ್ಟಿಗೆ ಇನ್ನಷ್ಟು ಚಿತ್ರಗಳು ಸೇರ್ಪಡೆಯಾಗಲಿವೆ.

ಪ್ರಮುಖವಾಗಿ ನಾಳೆ ಭಾನುವಾರ (ಜನವರಿ 11) ಪ್ರಮೋದ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಮೋದ್​ ಅಭಿನಯದ ಮೂರು ಚಿತ್ರಗಳು ಹೊಸದಾಗಿ ಘೋಷಣೆಯಾಗಲಿವೆ. ಈ ಪೈಕಿ ಒಂದು ಚಿತ್ರದ ಟೈಟಲ್​ ಹಾಗೂ ಆ ಚಿತ್ರದ ಫಸ್ಟ್​ ಲುಕ್​ ಅನಾವರಣಗೊಳ್ಳುತ್ತಿದೆ. ಈ ಚಿತ್ರವನ್ನು ಧನ್ವಿತ್​ ಕೇಶವ್​ ಎನ್ನುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, 'ಅಲಂಕಾರ್​ ವಿದ್ಯಾರ್ಥಿ' ಎಂಬ ಹೆಸರನ್ನು ಇಡಲಾಗಿದೆ.

ಇದಲ್ಲದೆ ಪೋಸ್ಟರ್​ ಡಿಸೈನರ್​ ಅವೀಸ್​ ನಿರ್ದೇಶನದ ಮೊದಲ ಚಿತ್ರ ಮತ್ತು ಸಂತೋಷ್​ ನಾಯಕ್​ ಅವರ ಇನ್ನೊಂದು ಹೊಸ ಚಿತ್ರವನ್ನು ಪ್ರಮೋದ್​ ಒಪ್ಪಿಕೊಂಡಿದ್ದಾರೆ. ಈ ಪೈಕಿ ಧನಂಜಯ್​ ಅಭಿನಯದ 'ರತ್ನನ್​ ಪ್ರಪಂಚ' ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಜನವರಿ 24ರಿಂದ ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ನಡೆಯಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಪ್ರಮೋದ್​ ಭಾಗವಹಿಸಲಿದ್ದಾರೆ.. ಅದಾದ ನಂತರ, 'ಇಂಗ್ಲೀಷ್​ ಮಂಜ' ಮತ್ತು 'ಅಲಂಕಾರ್​ ವಿದ್ಯಾರ್ಥಿ' ಚಿತ್ರಗಳು ಪ್ರಾರಂಭವಾಗಲಿವೆ.

ಇನ್ನು 'ಪ್ರೀಮಿಯರ್​ ಪದ್ಮಿನಿ' ಚಿತ್ರದ ಮುಂದುವರೆದ ಭಾಗ ಬರುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಇದೀಗ ಚಿತ್ರಕಥೆಯ ಕೆಲಸಗಳು ಬಹುತೇಕ ಮುಗಿದಿದ್ದು, ಮೇನಲ್ಲಿ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆಯಂತೆ. ಮೊದಲ ಚಿತ್ರಕ್ಕಿಂತ ಈ ಚಿತ್ರದ ಕ್ಯಾನ್ವಾಸ್​ ಮತ್ತು ತಾರಾಗಣ ದೊಡ್ಡದಾಗಿರಲಿದ್ದು, ಈ ಚಿತ್ರದಲ್ಲಿ ಜಗ್ಗೇಶ್​ ಅವರ ಜತೆಗೆ ಪ್ರಮೋದ್​ ಮತ್ತೊಮ್ಮೆ ತೆರೆಹಂಚಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಈಗ ಒಪ್ಪಿರುವ ಚಿತ್ರಗಳನ್ನು ಮುಗಿಸಿ, ಆ ಚಿತ್ರಕ್ಕೆ ಹೋಗುವುದಾಗಿ ಪ್ರಮೋದ್​ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net