ಮಾತು ಮುಗಿಸಿದ ‘ಬಾಂಡ್ ರವಿ’; ಸದ್ಯದಲ್ಲೇ ಬಿಡುಗಡೆ ...

final
Published on

ಬೆಂಗಳೂರು: ಈ ವರ್ಷದ ಏಪ್ರಿಲ್​ನಲ್ಲಿ ಪ್ರಾರಂಭವಾಗಿತ್ತು ಪ್ರಮೋದ್​ ಅಭಿನಯದ 'ಬಾಂಡ್​ ರವಿ'. ಹಲವು ದಿನಗಳ ಚಿತ್ರೀಕರಣದ ನಂತರ ಚಿತ್ರೀಕರಣ ಮುಗಿದಿರುವುದಷ್ಟೇ ಅಲ್ಲ, ಈಗ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಅಷ್ಟೇ ಅಲ್ಲ, ಚಿತ್ರದ ಡಬ್ಬಿಂಗ್​ ಇತ್ತೀಚೆಗೆ ಮುಗಿದಿದೆ.

ಪ್ರಮೋದ್ ನಟನೆಯ 'ಬಾಂಡ್ ರವಿ' ಸಿನಿಮಾದ ಡಬ್ಬಿಂಗ್ ಮುಗಿದಿದ್ದು, ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ. ಪ್ರಜ್ವಲ್ ಎಸ್.ಪಿ. ಈ ಚಿತ್ರವನ್ನು ನಿರ್ದೇಶಿಸಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ.

ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್‌ನಡಿ ನರಸಿಂಹಮೂರ್ತಿ ನಿರ್ಮಾಣ ಮಾಡಿರುವ ಆಕ್ಷನ್-ಲವ್​ಸ್ಟೋರಿಯಾಗಿರುವ 'ಬಾಂಡ್​ ರವಿ' ಚಿತ್ರದಲ್ಲಿ ಪುನೀತ್​ ರಾಜಕುಮಾರ್​ ಅಭಿಮಾನಿಯಾಗಿ ಪ್ರಮೋದ್​ ಕಾಣಿಡಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ ಮಂಗಳೂರು ಭಾಗದಲ್ಲಿ ಸುಮಾರು 50 ದಿನಗಳ‌ ಕಾಲ ಚಿತ್ರೀಕರಣ ಮಾಡಲಾಗಿದ್ದು, ರವಿ ಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ಗೋವಿಂದೇಗೌಡ, ಪವನ್, ಮಿಮಿಕ್ರಿ ಗೋಪಿ, ಗುರುರಾಜ್ ಹೊಸಕೋಟೆ ಮುಂತಾದವರು ನಟಿಸಿದ್ದಾರೆ.

'ಬಾಂಡ್ ರವಿ' ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣವಿದ್ದು, ಬಹಳ ದಿನಗಳ ನಂತರ ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಚಿನ್ಮಯ್ ಭಾವಿಕೆರೆ ಈ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net