

ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ ‘ಅಬ್ಬರ’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಹೊರಬಿದ್ದಿದೆ. ಚಿತ್ರವು ಆಗಸ್ಟ್ 12ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದೇ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ’ ಮತ್ತು ರವಿಚಂದ್ರನ್ ಅವರ ‘ರವಿ ಬೋಪಣ್ಣ’ ಸಹ ಬಿಡುಗಡೆಯಾಗುತ್ತಿವೆ. ಈ ಎರಡೂ ಚಿತ್ರಗಳಿಂದ ಚಿತ್ರಕ್ಕೆ ಸಮಸ್ಯೆ ಆಗುವುದಿಲ್ಲವೇ?
ಈ ಪ್ರಶ್ನೆಯನ್ನು ನಿರ್ದೇಶಕ ರಾಮ್ನಾರಾಯಣ್ ಅವರ ಮುಂದಿಟ್ಟರೆ, ‘ನಮ್ಮ ಚಿತ್ರದ ಕೆಲಸಗಳು ಮುಗಿದು ಎರಡು ತಿಂಗಳಾಗಿವೆ. ಆದರೆ, ಪ್ರತೀ ವಾರ ಎಂಟ್ಹತ್ತು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ, ನಾವು ಮುಂದೆ ಹೋಗುವ ಅನಿವಾರ್ಯ ಇತ್ತು. ಇನ್ನೆಷ್ಟು ದಿನ ಮುಂದೂಡುವುದು? ನಾವು ಬೇರೆ ಚಿತ್ರಗಳಿಗೆ ಹೆದರಿ ಭಯಪಡುತ್ತಿದ್ದರೆ, ನಮ್ಮ ಚಿತ್ರದಲ್ಲಿ ಕಂಟೆಂಟ್ ಇಲ್ಲ ಅಂದುಕೊಳ್ಳುತ್ತಾರೆ. ನಮ್ಮ ಚಿತ್ರದಲ್ಲೂ ಒಳ್ಳೆಯ ಕಂಟೆಂಟ್ ಇದೆ. ಎಷ್ಟೇ ಸಿನಿಮಾಗಳಿದ್ದರೂ, ಜನರಿಗೆ ಇಷ್ಟವಾದರೆ ಬಂದು ನೋಡುತ್ತಾರೆ ಎಂಬ ನಂಬಿಕೆ ಇದೆ. ನಮ್ಮದು ಸಣ್ಣ ಸಿನಿಮಾ ಅಲ್ಲ, ದೊಡ್ಡ ಸಿನಿಮಾ. ಜನ ಬಂದು ನೋಡುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ರಾಮ್ನಾರಾಯಣ್.
ಇನ್ನು, ಪ್ರಜ್ವಲ್ಗೆ ಇದು ನಟನಾಗಿ 29ನೇ ಚಿತ್ರವಂತೆ. ‘ಬಹಳ ಅದ್ಭುತವಾದ ಟೈಟಲ್. ಕಥೆ ಕೇಳಿದಾಗಲೇ, ‘ನನಗೆ ತುಂಬಾ ಕೆಲಸ ಕೊಡ್ತೀರಾ’ ಅಂತ ನಿರ್ದೇಶಕರಿಗೆ ಕೇಳಿದ್ದೆ. ಚಿತ್ರದಲ್ಲಿ ನನಗೆ ಮೂರು ಪಾತ್ರಗಳಿವೆ. ಇದೊಂದು ಮಜವಾದ ಚಿತ್ರ. ಕಥೆ ಕೇಳುವಾಗಲೇ ಬಹಳ ಕುತೂಹಲಕರವಾಗಿತ್ತು. ಕೊನೆಯ ಶಾಟ್ವರೆಗೂ ಆ ಕುತೂಹಲವನ್ನು ನಿರ್ದೇಶಕರು ಉಳಿಸಿಕೊಂಡಿದ್ದಾರೆ’ ಎನ್ನುತ್ತಾರೆ. ‘ಅಬ್ಬರ’ದಲ್ಲಿ ಪ್ರಜ್ವಲ್ಗೆ ನಿಮಿಕಾ ರತ್ನಾಕರ್, ರಾಜಶ್ರೀ ಪೊನ್ನಪ್ಪ ಮತ್ತು ಲೇಖಾ ಚಂದ್ರ ನಾಯಕಿಯರು. ರವಿಶಂಕರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಬಸವರಾಜ್ ಮಂಚಯ್ಯ ನಿರ್ವಿುಸಿದ್ದಾರೆ.