

ಹಾಸನ: ಇಲ್ಲೊಬ್ಬ 17 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರೂ ಹೆಂಡತಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿ ಈ ಕೊಲೆ ನಡೆದಿದೆ.
ಅಶ್ವಿನಿ (36) ಕೊಲೆಯಾದ ಮಹಿಳೆ. ಜಗದೀಶ್ ಕೊಲೆ ಆರೋಪಿ. ಇವರಿಬ್ಬರೂ 17 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ಜಗದೀಶ್, ನಂತರ ಅದರಲ್ಲಿ ನಷ್ಟಕ್ಕೀಡಾಗಿದ್ದ. ನಂತರ ಈತ ಪತ್ನಿ ಜತೆ ಆಗಾಗ ಜಗಳವಾಡುತ್ತಿದ್ದು, ಬೇಸತ್ತ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದಳು. ಜತೆಗೆ ಮೆಡ್ಪ್ಲಸ್ನಲ್ಲಿ ಕೆಲಸ ಮಾಡುತ್ತ ಜೀವನ ನಿರ್ವಹಿಸುತ್ತಿದ್ದಳು.
ಆದರೆ ಇಂದು ಮನೆಗೆ ಹೋಗಿದ್ದ ಜಗದೀಶ್, ಪತ್ನಿಗೆ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿ ಹೋಗಿದ್ದ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ನಂತರ ಪೊಲೀಸರಿಗೆ ಸುದ್ದಿ ಮುಟ್ಟಿ, ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಗದೀಶ್ ತಲೆಮರೆಸಿಕೊಂಡಿದ್ದು, ಬೇಲೂರು ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.