ಮಾಫಿಯಾ ವಿರುದ್ಧ ಪ್ರಜ್ವಲ್​ಹೋರಾಟ; ಹುಟ್ಟುಹಬ್ಬಕ್ಕೆ ಟೀಸರ್, ಪೋಸ್ಟರ್​ಗಳೇ ಉಡುಗೊರೆ

Prajwal
Published on

ಬೆಂಗಳೂರು: ‘ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ, ಸಾವು-ನೋವುಗಳ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಎಷ್ಟು ಸಮಂಜಸ? ಆದ್ದರಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ ...’ ಎಂದು ಪ್ರಜ್ವಲ್ ದೇವರಾಜ್ ತೀರ್ಮಾನಿಸಿಬಿಟ್ಟಿದ್ದಾರೆ. ಹಾಗಾಗಿ, ಇಂದು ಅವರ ಹುಟ್ಟುಹಬ್ಬದ ಆಚರಣೆಗಳು ಇರುವುದಿಲ್ಲ. ಮನೆಯ ಮುಂದೆ ಯಾವುದೇ ಸಂಭ್ರಮಗಳಿರುವುದಿಲ್ಲ. ಹಾಗಂತ ಅಭಿಮಾನಿಗಳು ಬೇಸರಿಸಿಕೊಳ್ಳಬೇಕಿಲ್ಲ. ಪ್ರಜ್ವಲ್ ಹುಟ್ಟುಹಬ್ಬವನ್ನು ಸೋಷಿಯಲ್ ಮೀಡಿಯಾದಲ್ಲಿ ಆಚರಿಸುವುದಕ್ಕೆ ಅವರು ಅಭಿನಯಿಸುತ್ತಿರುವ ಚಿತ್ರಗಳ ತಂಡಗಳು ನಿರ್ಧರಿಸಿವೆ. ಈಗಾಗಲೇ ‘ವೀರಂ’ ಚಿತ್ರದ ಟೀಸರ್ ಶನಿವಾರ ಸಂಜೆ ಐದು ಗಂಟೆ ಒಂದು ನಿಮಿಷಕ್ಕೆ ಬಿಡುಗಡೆಯಾಗಿದೆ.

ಇಂದು ಬೆಳಿಗ್ಗೆ ಗುರುದತ್ ಗಾಣಿಗ ನಿರ್ದೇಶನದ ‘ಮಾಫಿಯಾ’ ಚಿತ್ರದ ಫಸ್ಟ್​ಲುಕ್ ಪೋಸ್ಟರ್ ಅನಾವರಣಗೊಳ್ಳಲಿದೆ. ತಮಿಳಿನ ಜನಪ್ರಿಯ ನಟರಾದ ವಿಜಯ್ ಸೇತುಪತಿ ಮತ್ತು ಆರ್ಯ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಮತ್ತು ಡ್ರಗ್ಸ್ ಮಾಫಿಯಾದ ವಿರುದ್ಧ ಸಿಡಿದೇಳುವ ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ಇಲ್ಲಿ ನಟಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ದೇವರಾಜ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದಲ್ಲದೆ, ‘ಅರ್ಜುನ್ ಗೌಡ’, ‘ವೀರಂ’, ಪಿ.ಸಿ. ಶೇಖರ್ ನಿರ್ದೇಶನದ ಹೊಸ ಚಿತ್ರಗಳ ತಂಡದಿಂದ ಪೋಸ್ಟರ್ ಬಿಡುಗಡೆಯಾಗುವ ನಿರೀಕ್ಷೆ ಇದೆ.

ನಂದಕಿಶೋರ್ ನಿರ್ದೇಶನದಲ್ಲಿ ಹೊಸ ಚಿತ್ರ: ಇನ್ನು, ಸದ್ಯದಲ್ಲೇ ಶ್ರೇಯಸ್ ಮಂಜು ಅಭಿನಯದಲ್ಲಿ ‘ರಾಣಾ’ ಎಂಬ ಹೊಸ ಚಿತ್ರವನ್ನು ಶುರು ಮಾಡಲಿ ರುವ ‘ಪೊಗರು’ ಖ್ಯಾತಿಯ ನಂದಕಿಶೋರ್, ಆ ಚಿತ್ರ ಮುಗಿಸುತ್ತಿದ್ದಂತೆಯೇ ಪ್ರಜ್ವಲ್ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರ ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ‘ನಾನಿ’ ಖ್ಯಾತಿಯ ನಿರ್ದೇಶಕ ಸುಮಂತ್ ಕ್ರಾಂತಿ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net