

ಬೆಂಗಳೂರು: ಸದ್ಯ ರಾಜಕೀಯ ವ್ಯವಸ್ಥೆಯ ಬಗ್ಗೆ ಮತ್ತು ದೇಶದಲ್ಲಿ ಆಗಬೇಕಿರುವ ಹಲವು ಬದಲಾವಣೆಗಳ ಕುರಿತಾಗಿ ಹಲವು ಸಿನಿಮಾಗಳು ಬರುತ್ತಿವೆ. ಂಥದ್ದೊಂದು ಪ್ರಯತ್ನವನ್ನು ಡಾ. ವರದರಾಜು ಸಹ ಮಾಡಿದ್ದು, 'ಪ್ರಜಾರಾಜ್ಯ' ಎಂಬ ಚಿತ್ರವನ್ನು ಅವರು ಸದ್ದಿಲ್ಲದೆ ನಿರ್ಮಿಸಿದ್ದಾರೆ. ಪ್ರಜಾಪ್ರಭುತ್ವದ ಮಹತ್ವ ಸಾರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಟೀಸರ್ ಬಿಡುಗಡೆ ಮಾಡಿರುವುದು ದೇವರಾಜ್. ಅವರು ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರ ಎಂದರೆ ಅವರಿಲ್ಲಿ ರಾಜಕೀಯ ಮುಖಂಡನಾಗಿ ಕಾಣಿಸಿಕೊಂಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, 'ಈಗಿನ ರಾಜಕೀಯದ ಲೋಪದೋಷಗಳನ್ನು ತೋರಿಸಿ, ಅದಕ್ಕೆ ಪರಿಹಾರವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ಸಾಮಾಜಿಕ ಕಾಳಜಿಯಿರುವ ಇಂಥ ಪ್ರಯತ್ನಗಳು ಯಶಸ್ವಿಯಾಗಲಿ' ಎಂದು ದೇವರಾಜ್ ಹಾರೈಸಿದರು.
ಈ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ ವರದರಾಜು, 'ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ನಮ್ಮ ತಾತಂದಿರ ಕಾಲದಲ್ಲಿ ಸ್ವಾತಂತ್ರ್ಯ ಬಂದ ರಜತ ಮಹೋತ್ಸವ ಆಚರಿಸಿದರು. ನಮ್ಮ ತಂದೆಯ ಕಾಲದವರು ಸುವರ್ಣ ಮಹೋತ್ಸವ ಆಚರಣೆ ಮಾಡಿದರು. ನಾವು ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇಷ್ಟು ವರ್ಷವಾದರೂ ನಾವು ಯೋಚಿಸುವುದು ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಅಂತ? ಆದರೆ, ನಮಗೆ ಬೇಕಾದ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನಾವು ಯೋಚಿಸಿಯೇ ಇಲ್ಲ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವುದು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ಎಂದು. ನಾವು ಅದರ ಬಗ್ಗೆ ಯೋಚಸುತ್ತಲೇ ಇಲ್ಲ. ನಾವು ಈಗಿನಿಂದ ಯೋಚಿಸುವುದಕ್ಕೆ ಪ್ರಾರಂಭಿಸಿದರೆ, ನಮ್ಮ ಮೊಮ್ಮಕ್ಕಳ ಕಾಲಕ್ಕ ಸಹಾಯವಾಗುತ್ತದೆ. ಈ ಚಿತ್ರವನ್ನು ನೋಡಿದರೆ, ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯವೇನು? ಎಂಬ ಜವಾಬ್ದಾರಿ ಎಲ್ಲರಿಗೂ ಅರ್ಥವಾಗುತ್ತದೆ' ಎನ್ನುತ್ತಾರೆ. ನಿರ್ಮಾಣದ ಜತೆಗೆ ಅವರು ಈ ಚಿತ್ರದಲ್ಲೊಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ವಿಜಯ್ ಭಾರ್ಗವ ನಿರ್ದೇಶನ ಮಾಡಿದ್ದು, ಅವರು ಸಹ ಒಂದು ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಮತ್ತು ವಿಜಯ್ ಭಾರ್ಗವ ಬರೆದಿದ್ದಾರೆ. ವಿಜೇತ್ ಮಂಜಯ್ಯ ಸಂಯೋಜಿಸಿರುವ ಹಾಡುಗಳಿಗೆ ಉಪೇಂದ್ರ, ವಿಜಯ್ ಪ್ರಕಾಶ್ ಮುಂತಾದವರು ಧ್ವನಿಯಾಗಿದ್ದಾರೆ.
'ಪ್ರಜಾರಾಜ್ಯ' ಚಿತ್ರದಲ್ಲಿ ದೇವರಾಜ್, ಸುಧಾರಾಣಿ, ತಬಲಾ ನಾಣಿ, ಡಾ. ವರದರಾಜು, ಟಿ.ಎಸ್. ನಾಗಾಭರಣ, ಸಂಪತ್ ಮೈತ್ರೇಯ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ರೂಪೇಶ್ ರಾಜಣ್ಣ ಮುಂತಾದವರು ನಟಿಸಿದ್ದಾರೆ.