ಚಿತ್ರರಂಗದ ಗಣ್ಯರಿಂದ ಇಂದು ಅಶ್ವತ್ಥ್ ಗುಣಗಾನ

NB 3
Published on

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದಲ್ಲಿ ಭಾನುವಾರ (ಜ.19) ಸಂಜೆ 5ಕ್ಕೆ ಸ್ಯಾಂಡಲ್​ವುಡ್ ಕಲಾವಿದರ ದಂಡೇ ಇರಲಿದೆ. ಹೀಗೆ ಅವರೆಲ್ಲ ಇಲ್ಲಿ ಸೇರಲು ಕಾರಣ, ಚಾಮಯ್ಯ ಮೇಷ್ಟ್ರು. ಅಂದರೆ ಪುಟ್ಟಣ್ಣ ಕಣಗಾಲ್ ನಿರ್ದೇಶನ, ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಸಿನಿಮಾದ ‘ಚಾಮಯ್ಯ ಮೇಷ್ಟ್ರು’ ಪಾತ್ರದಿಂದ ಜನರ ಮನದಲ್ಲಿ ಅಚ್ಚೊತ್ತಿರುವ ಹಿರಿಯ ನಟ ಕೆ.ಎಸ್.ಅಶ್ವತ್ಥ್ ಅವರನ್ನು ಸ್ಮರಿಸಲು ಚಿತ್ರರಂಗದ ಗಣ್ಯರನೇಕರು ಆಗಮಿಸಲಿದ್ದಾರೆ.

ಅಶ್ವತ್ಥ್ ನಮ್ಮನ್ನೆಲ್ಲ ಅಗಲಿ ಜ. 18ಕ್ಕೆ ಭರ್ತಿ ಒಂದು ದಶಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ‘ಕೆ.ಎಸ್. ಅಶ್ವತ್ಥ್ ಅವರ ಸವಿನೆನಪು’, ‘ಚಾಮಯ್ಯ ಮಾಸ್ಟರ್ ಅವರ 10ನೇ ಪುಣ್ಯಸ್ಮರಣೆ’ ಎಂಬ ಕಾರ್ಯಕ್ರಮವನ್ನು ಅವರ ಪುತ್ರ ಶಂಕರ್ ಅಶ್ವತ್ಥ್ ಮತ್ತು ಕುಟುಂಬದವರು ಹಾಗೂ ಕೆ.ಎಸ್.ಅಶ್ವತ್ಥ್ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್, ಹಿರಿಯ ಕಲಾವಿದರಾದ ಜಯಂತಿ, ಶಿವರಾಂ, ರಾಜೇಶ್, ಶ್ರೀನಾಥ್, ಜೈಜಗದೀಶ್, ಅಶೋಕ್, ಗಿರಿಜಾ ಲೋಕೇಶ್, ಜಯಾ, ಸಿಹಿಕಹಿ ಚಂದ್ರು, ಶೈಲಶ್ರೀ ಸುದರ್ಶನ್, ನಿರ್ದೇಶಕರಾದ ಭಾರ್ಗವ, ಕೋಡ್ಲು ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ, ಗೀತರಚನೆಕಾರ ದೊಡ್ಡರಂಗೇಗೌಡ, ಗಾಯಕಿ ಕಸ್ತೂರಿ ಶಂಕರ್, ನಿರ್ವಪಕ ಎಸ್.ಎ. ಗೋವಿಂದರಾಜು, ಹಿರಿಯ ನಿರ್ಮಾಣ ವ್ಯವಸ್ಥಾಪಕ ಆರ್.ವೇಣುಗೋಪಾಲ, ಛಾಯಾಗ್ರಾಹಕ ಬಿ.ಎಸ್.ಬಸವರಾಜು, ಹಿರಿಯ ಸಿನಿಮಾ ಪತ್ರಕರ್ತ ಟಿ.ಜಿ.ಅಶ್ವತ್ಥನಾರಾಯಣ ಅವರು ಅಶ್ವತ್ಥ್ ಕುರಿತು ಮಾತನಾಡಲಿದ್ದಾರೆ ಎಂದು ಚಾಮಯ್ಯ ಮೇಷ್ಟ್ರ ಅಭಿಮಾನಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರೂ ಆಗಿರುವ ಈ.ಟಿ.ಕೇರ್ ರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net