

ಬೆಂಗಳೂರು: ಶಿವರಾಜಕುಮಾರ್ ಅಭಿನಯದಲ್ಲಿ ಯೋಗರಾಜ್ ಭಟ್ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕಳೆದ ತಿಂಗಳಷ್ಟೇ ಕೇಳಿಬಂದಿತ್ತು. ಎಲ್ಲ ಕೂಡಿ ಬಂದರೆ, ಶಿವಣ್ಣ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುವ ಆಸೆಯನ್ನು ಭಟ್ಟರು ಸಹ ವ್ಯಕ್ತಪಡಿಸಿದ್ದರು. ಆ ಆಸೆಗೆ ಇದೀಗ ಇನ್ನಷ್ಟು ರೆಕ್ಕೆ-ಪುಕ್ಕ ಅಂಟಿಕೊಂಡಂತಿದೆ. ಪ್ರಮುಖವಾಗಿ, ಚಿತ್ರದ ಕೆಲಸಗಳು ಭರದಿಂದ ಸಾಗಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಜತೆಗೆ ಪ್ರಭುದೇವ ಸಹ ನಟಿಸುತ್ತಿರುವ ಮುನ್ಸೂಚನೆ ಸಿಕ್ಕಿದೆ.
ಸದ್ಯಕ್ಕೆ ಪ್ರಭುದೇವ ಮತ್ತು ಅವರ ಪಾತ್ರದ ಬಗ್ಗೆ ಯೋಗರಾಜ್ ಭಟ್ ಯಾವುದೇ ಮಾಹಿತಿ ಬಿಟ್ಟು ಕೊಡದಿದ್ದರೂ, ಈಗಾಗಲೇ ಅವರ ಜತೆಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಪ್ರಭುದೇವ ಸಹ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭುದೇವ ಅವರು ಈ ಹಿಂದೆ ಕನ್ನಡದ ‘ಎಚ್ಟುಓ’ ಮತ್ತು ‘ಮನಸೆಲ್ಲಾ ನೀನೇ’ ಚಿತ್ರಗಳಲ್ಲಿ ನಟಿಸಿದ್ದರು. ಈಗ ಅವರು ಕನ್ನಡಕ್ಕೆ ವಾಪಸಾಗುತ್ತಿದ್ದಾರೆ. ಹರಿಪ್ರಿಯಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.