

ಹೈದರಾಬಾದ್: ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ನಟ ಪ್ರಭಾಸ್ ಅಭಿನಯದ “ಸಲಾರ್” ಸಿನಿಮಾ ಡಿ.22ರಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ. ಚಿತ್ರ ಬಿಡುಗಡೆಗೆ ಇನ್ನೂ ಐದೇ ದಿನ ಬಾಕಿ ಇದೆ. ಹೀಗಾಗಿ ಚಿತ್ರತಂಡ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಸಿನಿ ಅಭಿಮಾನಿಗಳು ಕೂಡ ಕಾತರದಿಂದ ಎದುರು ನೋಡುತ್ತಿದ್ದಾರೆ. ಇದರ ನಡುವೆ ಚಿತ್ರದ ಮೊದಲ ವಿಮರ್ಶೆ ಹೊರಬಿದ್ದಿದೆ.
ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ದುಬೈ ಮೂಲದ ಉಮೈರ್ ಸಂಧು, ಸಲಾರ್ ಚಿತ್ರದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಲಾರ್ ಸಿನಿಮಾ ಒಂದು ಸಂಪೂರ್ಣ ಮನರಂಜನೆಯ ಸಿನಿಮಾವಾಗಿದೆ. ಪ್ರಭಾಸ್ ಅವರನ್ನ ಹಿಂದೆಂದೂ ಈ ರೀತಿಯಾಗಿ ನೋಡಿಲ್ಲ. ಆ್ಯಕ್ಸನ್ ಸೀನ್ ಸ್ಟೈಲಿಶ್ ಆಗಿದೆ ಮತ್ತು ಹಿನ್ನೆಲೆ ಸಂಗೀತ ಸೂಪರ್ ಆಗಿದೆ. ಪ್ರಭಾಸ್ ಈ ಸಿನಿಮಾ ಒಳ್ಳೆಯ ಕಮ್ಬ್ಯಾಕ್ ಸಿನಿಮಾ ಆಗಲಿದೆ. ಮಾಸ್ ಪಾತ್ರಗಳು ಅಂತಾ ಬಂದಾಗ ಪ್ರಭಾಸ್ ಅವರೇ ಬಾಸ್. ಈ ಪಾತ್ರವು ತನ್ನನ್ನು ಸಾಬೀತುಪಡಿಸಲು ಪ್ರಭಾಸ್ಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಇದಿಷ್ಟೇ ಅಲ್ಲದೆ, ಉಮೈರ್ ಸಂಧು, ಸಲಾರ್ ಚಿತ್ರಕ್ಕೆ 5 ಕ್ಕೆ 4 ರೇಟಿಂಗ್ ನೀಡಿದ್ದಾರೆ. ‘ಬಾಸ್’ ರೇಂಜ್ ನಲ್ಲಿ ಪರ್ಫಾಮೆನ್ಸ್ ಕೊಟ್ಟಿದ್ದು ಪ್ರಭಾಸ್ ಮಾತ್ರ ಎಂದಿದ್ದಾರೆ ಉಮೈರ್ ಸಂಧು. ಆದರೆ, ಸಂಧು ಹೇಳಿದ ಮಾತು ಎಷ್ಟು ಸತ್ಯ ಎಂಬುದು ಸಿನಿಮಾ ಬಿಡುಗಡೆಯ ಬಳಿಕ ಗೊತ್ತಾಗಲಿದೆ. ಏಕೆಂದರೆ, ಈ ಉಮೈರ್ ಸಂಧು ವಿವಾದಗಳಿಂದಲೇ ಸುದ್ದಿಯಾದವರು. ತಾನೊಬ್ಬ ಯುಕೆ, ಯುಎಇ ಮತ್ತು ಭಾರತದ ಸಿನಿಮಾ ಮತ್ತು ಫ್ಯಾಷನ್ ವಿಮರ್ಶಕ ಎಂದು ಹೇಳಿಕೊಂಡಿದ್ದಾರೆ.
ಸೆಲಿಬ್ರಿಟಿಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೇ ಹೆಚ್ಚು ಕುಖ್ಯಾತಿ ಪಡೆದಿದ್ದಾರೆ. ಕನ್ನಡದ ನಟ ಸುದೀಪ್ ಹಾಗೂ ಯಶ್ ಸೇರಿದಂತೆ ವಿವಿಧ ಇಂಡಸ್ಟ್ರಿಯ ನಟ, ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಿರುತ್ತಾರೆ. ಈ ಮೂಲಕ ಅಭಿಮಾನಿಗಳ ಭಾವನೆಗೆ ಧಕ್ಕೆ ತರುವುದು ಉಮೈರ್ ಸಂಧು ಖಯಾಲಿ ಆಗಿದೆ.
ಇನ್ನು ಸಲಾರ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಲಾರ್ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಸಲಾರ್ ಸೀಸ್ಫೈರ್ ಹೆಸರಿನಲ್ಲಿ ಡಿ.22ರಂದು ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಟ್ರೈಲರ್ನಿಂದ ಸದ್ದು ಮಾಡಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಲಕ್ಷಣಗಳು ಕಾಣುತ್ತಿದೆ. ಅಲ್ಲದೆ, ಬಾಹುಬಲಿ ಬಳಿಕ ಸತತ ಸೋಲುಗಳನ್ನು ಅನುಭವಿಸಿರುವ ಪ್ರಭಾಸ್ಗೆ ಈ ಸಿನಿಮಾ ಒಂದೊಳ್ಳೆ ಕಮ್ಬ್ಯಾಕ್ ಆಗುವ ಸಾಧ್ಯತೆ ಇದೆ. ಅಂದಹಾಗೆ ಸಲಾರ್ ಸಿನಿಮಾ ಎರಡು ಬಾರಿ ಪೋಸ್ಟ್ಪೋನ್ ಆಗಿದ್ದು, ಅಂತಿಮವಾಗಿ ತೆರೆಗೆ ಅಪ್ಪಳಿಸುತ್ತಿದೆ. ಕೆಜಿಎಫ್ ಕಾರಣದಿಂದಾಗಿ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ. ಆದರೆ, ಸಿನಿಮಾ ತಂಡ ಈವರೆಗೂ ಯಾವುದೇ ಪ್ರೆಸ್ಮೀಟ್ ಮಾಡಿಲ್ಲ ಮತ್ತು ಪ್ರಚಾರವನ್ನು ಆರಂಭಿಸಿಲ್ಲ. ಇದಿಷ್ಟೇ ಅಲ್ಲದೆ, ಒಂದೇ ಒಂದು ಸಂದರ್ಶನವನ್ನೂ ಈವರೆಗೆ ನೀಡಿಲ್ಲ. ಇದು ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದೆ.
ಪ್ರಭಾಸ್ ಹೊರತುಪಡಿಸಿ, ನಾಯಕಿಯಾಗಿ ಶ್ರುತಿ ಹಾಸನ್, ನಟ ಜಗಪತಿ ಬಾಬು, ಈಶ್ವರಿ ರಾವ್, ಶ್ರಿಯಾ ರೆಡ್ಡಿ, ಪೃಥ್ವಿರಾಜ್ ಸುಕುಮಾರ್ ಮತ್ತು ತಿನ್ನು ಆನಂದ್ ಸೇರಿದಂತೆ ಬಹುತಾರಾಗಣವೇ ಈ ಚಿತ್ರದಲ್ಲಿದೆ. ದೊಡ್ಡ ಬಜೆಟಿನ ಚಿತ್ರವಾಗಿದ್ದು, ಕೆಜಿಎಫ್ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಿಸಿದೆ. ರವಿ ಬಸ್ರೂರ್ ಅವರೇ ಸಲಾರ್ಗೂ ಸಂಗೀತ ನೀಡಿದ್ದಾರೆ. (ಏಜೆನ್ಸೀಸ್)