ಕೊನೆಗೂ ಫಿಕ್ಸ್​ ಆಯ್ತು ಪ್ರಭಾಸ್​ ಮದುವೆ! ವಧು ಯಾರೆಂಬುದನ್ನು ಬಹಿರಂಗಪಡಿಸಿದ ನಟ ರಾಮ್​ಚರಣ್​ | Prabhas

Prabhas
Published on

Prabhas ​: ತೆಲುಗು ಚಿತ್ರರಂಗದ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಅಂದರೆ ಅದು​ ಪ್ರಭಾಸ್​. ವಯಸ್ಸು 45 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಕೊನೆಯದಾಗಿ ಅವರ ನಟನೆಯ ಕಲ್ಕಿ ಸಿನಿಮಾ ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತು. ಸಾಲು ಸಾಲು ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್​ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಪ್ರಭಾಸ್​ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಪ್ರಭಾಸ್​ ಅಭಿಮಾನಿಗಳು ಖುಷಿಯಾಗುವಂತಹ ವಿಚಾರವೊಂದು ಹೊರಬಿದ್ದಿದೆ. ಅದು ಕೂಡ ಟಾಲಿವುಡ್​ ಸೂಪರ್​ಸ್ಟಾರ್​ ರಾಮ್​ಚರಣ್​ ಅವರ ಮಾತುಗಳಿಂದಲೇ ಅನ್ನೋದು ಖುಷಿಯ ವಿಚಾರ.

ಪ್ರಭಾಸ್ ಮತ್ತು ರಾಮ್​ಚರಣ್​ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ರಾಮ್​ಚರಣ್ ಪ್ರಭಾಸ್ ಮದುವೆಯ ಬಗ್ಗೆ ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಟಾಲಿವುಡ್​ ಸ್ಟಾರ್​ ನಟ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಅನ್‌ಸ್ಟಾಪಬಲ್ ಕಾರ್ಯಕ್ರಮದಲ್ಲಿ ಪ್ರಭಾಸ್ ಯಾರನ್ನು ಮದುವೆಯಾಗುತ್ತಾರೆ ಎಂಬುದನ್ನು ರಾಮ್​ಚರಣ್ ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ.

ಬಾಲಕೃಷ್ಣ ಅವರು ಪ್ರಭಾಸ್ ಮದುವೆಯ ಕುರಿತು ಪ್ರಶ್ನೆ ಮಾಡಿದಾಗ, ಬಹುಶಃ ವಧು, ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ಗಣಪವರಂ ಎಂಬ ಸಣ್ಣ ಪಟ್ಟಣದಿಂದ ಬರಬಹುದು ಎಂದಿದ್ದಾರೆ. ಪರೋಕ್ಷವಾಗಿ ವಧುವಿನ ಬಗ್ಗೆ ರಾಮ್​ಚರಣ್​ ಸುಳಿವು ನೀಡಿದ್ದು, ಶೀಘ್ರದಲ್ಲೇ ಪ್ರಭಾಸ್​ ಮದುವೆ ಆಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಅಭಿಮಾನಿಗಳಿಗೂ ಕೂಡ ಇದು ಖುಷಿಯ ವಿಚಾರವಾಗಿದೆ.

ಅಂದಹಾಗೆ ಒಟಿಟಿ ವೇದಿಕೆ ಆಹಾದಲ್ಲಿ ಅನ್‌ಸ್ಟಾಪಬಲ್ ಸೀಸನ್ 4 ಯಶಸ್ವಿಯಾಗಿ ನಡೆಯುತ್ತಿದೆ. ಗೇಮ್ ಚೇಂಜರ್ ಪ್ರಚಾರದ ಭಾಗವಾಗಿ ರಾಮ್ ಚರಣ್ ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗವಹಿಸಿದರು. ರಾಮ್​ಚರಣ್‌ಗೆ ಸಂಬಂಧಿಸಿದ ಸಂಚಿಕೆಯ ಮೊದಲ ಭಾಗವು ಜನವರಿ 8ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಇದರಲ್ಲಿ, ರಾಮ್​ಚರಣ್ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು ಕ್ಲೀನ್​ಕ್ಲಾರಾ ಬಗ್ಗೆಯೂ ಮಾತನಾಡಿದರು.

ಇನ್ನು ಸಂಚಿಕೆಯ ಎರಡನೇ ಭಾಗದಲ್ಲಿ, ರಾಮ್​ಚರಣ್ ಅವರು ಪ್ರಭಾಸ್ ಅವರ ಮದುವೆಗೆ ಸಂಬಂಧಿಸಿದ ವಿಷಯಗಳ ಜೊತೆಗೆ ಕೆಲವು ಇತರ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂಚಿಕೆಯು ಜನವರಿ 17 ರಂದು ಆಹಾದಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಾಮ್​ಚರಣ್ ಅವರ ಗೇಮ್ ಚೇಂಜರ್ ಚಿತ್ರ ಜನವರಿ 10ರಂದು ಬಿಡುಗಡೆಯಾಯಿತು. ಮೊದಲ ದಿನದಿಂದಲೇ ಈ ಚಿತ್ರ ಪಾಸಿಟಿವ್​ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ದಿನವೇ ವಿಶ್ವಾದ್ಯಂತ 186 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net