ಪ್ರಭಾಸ್​ಗೆ ಜೋಡಿ ಆಗ್ತಾರಾ ಕತ್ರಿನಾ?

KATRINA PRABAS
Published on

‘ಬಾಹುಬಲಿ’, ‘ಸಾಹೋ’ ಸಿನಿಮಾ ಬಳಿಕ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿ ಮಾಡಿಕೊಂಡಿರುವ ನಟ ಪ್ರಭಾಸ್, ಈಗ ಮುಂದಿನ ಸಿನಿಮಾಕ್ಕಾಗಿ ತಯಾರಿ ನಡೆಸಿದ್ದಾರೆ. ‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆಯಾದರೂ, ಇಲ್ಲಿಯವರೆಗೂ ಸಿನಿಮಾದ ಬಗ್ಗೆ ಯಾವುದೇ ಅಪ್​ಡೇಟ್ ಮಾಹಿತಿ ಲಭ್ಯವಾಗಿರಲಿಲ್ಲ.

ಈಗ ಚಿತ್ರದ ಕುರಿತಾಗಿ ದೊಡ್ಡ ಸುದ್ದಿಯೊಂದು ಕೇಳಿ ಬರುತ್ತಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದಿರುವ ಈ ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಕತ್ರಿನಾ ಕೈಫ್ ಅವರನ್ನು ಕರೆತರುವ ಲೆಕ್ಕಾಚಾರದಲ್ಲಿದ್ದಾರೆ ನಾಗ್. ಬಹುಭಾಷೆಯಲ್ಲಿ ತೆರೆಕಂಡಿದ್ದ ‘ಸಾಹೋ’ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದರು. ಈಗ ಕತ್ರಿನಾ ಕೈಫ್ ಅವರತ್ತ ನಿರ್ದೇಶಕರು ಗಮನಹರಿಸಿದ್ದಾರೆ.

ಭಾರಿ ವೆಚ್ಚದಲ್ಲಿ ಚಿತ್ರ ಸಿದ್ಧಗೊಳ್ಳಲಿರುವುದರಿಂದ ಅಷ್ಟೇ ದೊಡ್ಡ ತಾರಾಗಣವನ್ನೂ ಚಿತ್ರತಂಡ ಆಯ್ದುಕೊಳ್ಳುವ ಪ್ಲ್ಯಾನ್​ನಲ್ಲಿದೆ. ಆ ಪೈಕಿ ನಾಯಕಿ ಆಯ್ಕೆಗೆ ಬಲೆ ಬೀಸಿದ್ದು, ಕತ್ರಿನಾಗೆ ಮಣೆ ಹಾಕಲಾಗಿದೆ ಎನ್ನಲಾಗಿದೆ. ಇತ್ತ ರಾಧಾಕೃಷ್ಣ ನಿರ್ದೇಶನದ ‘ಜಾನ್’ ಸಿನಿಮಾದ ಕೆಲಸಗಳಲ್ಲೂ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net